ನವದೆಹಲಿ: ಭಾರತದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಶೇಕಡಾ 6ಕ್ಕಿಂತ ಕಡಿಮೆ ಉಪನ್ಯಾಸಕರು ಮೀಸಲು ವಿಭಾಗದಿಂದ ಬಂದವರಾಗಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಹಿರಂಗಪಡಿಸಿದೆ.
ನಿನ್ನೆ ರಾಜ್ಯಸಭೆಯಲ್ಲಿ ಕಲಾಪದ ವೇಳೆ ಕಾಂಗ್ರೆಸ್ ಸಂಸದ ರಿಪುನ್ ಬೊರಾ ಕೇಳಿದ ಪ್ರಶ್ನೆಗೆ ಸರ್ಕಾರ ದೇಶದ 40 ಉನ್ನತ ವಿಶ್ವವಿದ್ಯಾಲಯಗಳ ಅಂಕಿಅಂಶವನ್ನು ಬಹಿರಂಗಪಡಿಸಿದೆ. ಮೀಸಲಾತಿ ಕೋಟಾದಿಂದ 2 ಸಾವಿರದ 621 ಸಹಾಯಕ ಪ್ರೊಫೆಸರ್ ಗಳು ಮತ್ತು ಅಶಕ್ತರ ಕೋಟಾದಿಂದ ಎಸ್ಸಿ, ಎಸ್ಟಿ, ಒಬಿಸಿ ಕೋಟಾದಿಂದ 62 ಪ್ರೊಫೆಸರ್ ಗಳು ಇದ್ದಾರೆ ಎಂದು ಬಹಿರಂಗಪಡಿಸಿದೆ.
ಸಹಾಯಕ ಪ್ರೊಫೆಸರ್ ಹಂತದಲ್ಲಿ 40 ವಿಶ್ವವಿದ್ಯಾಲಯಗಳಲ್ಲಿನ 2 ಸಾವಿರದ 524 ಹುದ್ದೆಗಳಲ್ಲಿ ಕೇವಲ 178 ಹುದ್ದೆಗಳು ಮಾತ್ರ ಮೀಸಲಾತಿ ಹುದ್ದೆಗಳಾಗಿವೆ. ಆರಂಭಿಕ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಸಮಾನತೆ ಇದ್ದರೂ ಕೂಡ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಬೋಧಕ ಹುದ್ದೆಗಳಲ್ಲಿ ಈ ಪ್ರಮಾಣದಲ್ಲಿ ವ್ಯತ್ಯಾಸ ಬಹಳವಾಗಿದೆ.
ಇಲ್ಲಿಯವರೆಗೆ ಸರ್ಕಾರ ಅನುಸರಿಸಿಕೊಂಡು ಬಂದಿರುವ ಸೂಕ್ತವಲ್ಲದ ನೀತಿಯಿಂದಾಗಿ ಈ ರೀತಿಯಾಗಿದ್ದು ವಿಶ್ವವಿದ್ಯಾಲಯಗಳಲ್ಲಿ ಆರಂಭಿಕ ಹಂತದಲ್ಲಿ ಹೊರತುಪಡಿಸಿ ನೇಮಕದಲ್ಲಿ ಯಾವುದೇ ಮೀಸಲಾತಿಯಿಲ್ಲ ಎಂಬ ನೀತಿಯಿಂದಾಗಿ ಹೀಗೆ ಆಗಿದೆ ಎನ್ನುತ್ತಾರೆ ದೆಹಲಿ ವಿಶ್ವವಿದ್ಯಾಲಯದ ಶ್ಯಾಮಲಾಲ್ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಜಿತೇಂದ್ರ ಕುಮಾರ್.