ತಾಯ್ನಾಡಿಗೆ ಮರಳಿದ ವೀರ ಯೋಧ ಅಭಿನಂದನ್
ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವೀರಯೋಧ ವಿಂಡ್ ಕಮಾಂಡರ್ ಅಭಿನಂದನ್ ಅವರ ಬಿಡುಗಡೆಯಾಗಿದ್ದು, ಬಿಡುಗಡೆಯ ಬಳಿಕದ ಕೆಲ ಹಸ್ತಾಂತರ ಪ್ರಕ್ರಿಯೆಗಳನ್ನು ಅವರು ಪೂರ್ಣಗೊಳಿಸಲಿದ್ದಾರೆ.
ಭಾರತದ ವೀರಯೋಧ ಅಭಿನಂದನ್ ವರ್ತಮಾನ್ ರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದೆಯಾದರೂ, ಇನ್ನೂ ಕೆಲ ದಿನಗಳ ಕಾಲ ಅಭಿನಂದನ್ ರಹಸ್ಯವಾಗಿರಲಿದ್ದಾರೆ. ಭಾರತೀಯ ಸೇನಾಪಡೆಗಳು ಅಭಿನಂದನ್ ರನ್ನು ತಮ್ಮಲ್ಲಿಯೇ ಉಳಿಸಿಕೊಂಡು ಅವರು ಪಾಕಿಸ್ತಾನದಲ್ಲಿ ಕಳೆದ ಅಷ್ಟೂ ಸಮಯ ಮತ್ತು ಪಾಕ್ ಅಧಿಕಾರಿಗಳ ವಿಚಾರಣೆ ಕುರಿತು ಅಭಿನಂದನ್ ರನ್ನು ಪ್ರಶ್ನೆ ಮಾಡಲಿದ್ದಾರೆ.
ಈ ಬಗ್ಗೆ ಸೇನಾ ಮೂಲಗಳು ಮಾಹಿತಿ ನೀಡಿದ್ದು, ಪಾಕಿಸ್ತಾನ ಅಭಿನಂದನ್ ರನ್ನು ಭಾರತಕ್ಕೆ ಹಸ್ತಾತಂತರಿಸಿದ ನಂತರ ವಾಯುಸೇನೆ ಅಧಿಕಾರಿಗಳು ಅವರನ್ನು ವಾಯುಸೇನೆಯ ಗುಪ್ತಚರ ಘಟಕಕ್ಕೆ ಕರೆದೊಯ್ಯುತ್ತಾರೆ. ಈ ವೇಳೆ ಸಾಕಷ್ಟು ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ಗಳನ್ನು ಅಳವಡಿಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಸ್ಕ್ಯಾನಿಂಗ್ ನಡೆಯಲಿದೆ.
ಅಭಿನಂದನ್ ಕೇವಲ ದೈಹಿಕವಾಗಿ ಮಾತ್ರವಲ್ಲದೇ ಅವರನ್ನು ಮಾನಸಿಕವಾಗಿಯೂ ಪರೀಕ್ಷೆ ಮಾಡಲಾಗುತ್ತದೆಯಂತೆ. ಅಭಿನಂದನ್ ವೈರಿ ರಾಷ್ಟ್ರದಲ್ಲಿ ಏಕಾಂಗಿಯಾಗಿದ್ದರು. ಭಾರತದ ಭದ್ರತಾ ರಹಸ್ಯಗಳನ್ನು ಹೇಳುವಂತೆ ಅಲ್ಲಿನ ಅಧಿಕಾರಿಗಳು ಒತ್ತಡ ಹೇರಿರುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಬಂಧನದಲ್ಲಿದ್ದಾಗ ಪಾಕಿಸ್ತಾನ ಯಾವ ರೀತಿಯ ಮಾಹಿತಿಗಳನ್ನು ಕೇಳಿತ್ತು. ಅದರಲ್ಲಿ ಯಾವ ಪ್ರಶ್ನೆಗಳಿಗೆ ಇವರು ಉತ್ತರ ನೀಡಿದರು ಎನ್ನುವ ಬಗ್ಗೆ ಅಭಿನಂದನ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಿರುತ್ತದೆ. ಮಾಹಿತಿ ಸಂಗ್ರಹಣೆಗೆ ವೈರಿ ರಾಷ್ಟ್ರದವರು ತನ್ನನ್ನು ನೇಮಕ ಮಾಡಿಕೊಂಡಿಲ್ಲ ಎಂಬ ಖಾತ್ರಿಯನ್ನು ಅಭಿನಂದನ್ ವಾಯುಸೇನೆ ಅಧಿಕಾರಿಗಳಿಗೆ ನೀಡಬೇಕು. ಇದು ಬೇಸರದ ಸಂಗತಿಯಾದರೂ, ದೇಶದ ಭದ್ರತಾ ಹಿತದೃಷ್ಟಿಯಿಂದ ಅನಿವಾರ್ಯದ ಪ್ರಕ್ರಿಯೆಯಾಗಿರುತ್ತದೆ.
ಅಭಿನಂದನ್ ಭಾರತಕ್ಕೆ ವಾಪಸ್ಸಾದ ನಂತರ ಗುಪ್ತಚರ ಇಲಾಖೆಗೆ ಅಥವಾ ರಾ ಸಂಸ್ಥೆಗೆ ಅವರನ್ನು ಹಸ್ತಾಂತರ ಮಾಡುವ ಸಾಧ್ಯತೆಯೂ ಇದೆ. ಈ ಮೊದಲು ವೈರಿ ರಾಷ್ಟ್ರಗಳಿಂದ ಬಂಧನಕ್ಕೊಳಗಾದವರನ್ನು ಐಬಿ ಹಾಗೂ ರಾ ಸಂಸ್ಥೆಗಳು ತನಿಖೆ ನಡೆಸಿದ ಉದಾಹರಣೆಗಳಿವೆ. ಆದರೆ, ಈ ಪ್ರಕರಣಗಳದಲ್ಲೂ ಹಾಗೆಯೇ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos