ಮುಂಬೈ: ನೀವು ಭಾರತಕ್ಕೆ ಆಗಮಿಸಿ, ಕಾನೂನು ಪ್ರಕ್ರಿಯೆಗಳನ್ನು ಎದುರಿಸುವುದು ಯಾವಾಗ? ಎಂದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರುಪಾಯಿ ವಂಚಿಸಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಅಕ್ರಮ ಹಣ ವಹಿವಾಟು ತಡೆ(ಪಿಎಂಎಲ್ಎ) ಕೋರ್ಟ್ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ್ದು, ಇದನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಂದ್ರಜೀತ್ ಮಹಂತಿ ಹಾಗೂ ಸರಂಗ್ ಕೋತ್ವಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠ, ನೀವು ವಿಚಾರಣೆ ಎದುರಿಸುವುದು ಯಾವಾಗ ಎಂದು ಪ್ರಶ್ನಿಸಿದೆ.
ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವುದರಿಂದ ಸಾಲ ನೀಡಿದವರಿಗೆ ತೊಂದರೆಯಾಗುತ್ತದೆ. ಬ್ಯಾಂಕ್ ನಿಂದ ಪಡೆದ ಸಾವಿರಾರು ಕೋಟಿ ರುಪಾಯಿಯನ್ನು ಮಲ್ಯ ಅವರು ಸ್ವಯಂಪ್ರೇರಿತರಾಗಿ ಮರುಪಾವತಿ ಮಾಡಿದ್ದಾರೆ ಎಂದು ವಿಜಯ್ ಮಲ್ಯ ಪರ ವಕೀಲರು ವಾದಿಸಿದರು.
ಆರ್ಥಿಕ ಅಪರಾಧಿ ಎಂದು ಘೋಷಿಸಿರುವುದು ಸಂವಿಧಾನ ಬಾಹಿರ ಮತ್ತು ಇದರಿಂದ ಕೇಂದ್ರ ಸರ್ಕಾರ ಉದ್ಯಮಿಯ ಎಲ್ಲಾ ಆಸ್ತಿಯನ್ನು ಜಪ್ತಿ ಮಾಡಲು ಅವಕಾಶ ನೀಡಿದಂತಾಗಿದೆ ಎಂದು ಮಲ್ಯ ಪರ ವಕೀಲ ಅಮಿತ್ ದೇಸಾಯಿ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಿಮ್ಮ ಕಕ್ಷಿದಾರರು ಬಂದು ವಿಚಾರಣೆ ಎದುರಿಸಿದರೆ ಆರ್ಥಿಕ ಅಪರಾಧಿ ಟ್ಯಾಗ್ ತೆಗೆದುಹಾಕಲಾಗುತ್ತದೆ ಎಂದರು.
ವಿಜಯ್ ಮಲ್ಯ ಅವರು ದೇಶಕ್ಕೆ ಮರಳಲು ಸಿದ್ಧರಿದ್ದಾರೆ. ಆದರೆ ಬ್ರಿಟಿಷ್ ಕೋರ್ಟ್ ತನ್ನ ಅನುಮತಿ ಇಲ್ಲದೆ ತೆರಳದಂತೆ ನನ್ನ ಕಕ್ಷಿದಾರರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ದೇಸಾಯಿ ಕೋರ್ಟ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics