ದೇಶ

ಉಗ್ರಗಾಮಿ ಸಂಘಟನೆಗಳ ದಮನಕ್ಕೆ ಪಾಕಿಸ್ತಾನ ವಿಶ್ವಾಸಾರ್ಹ, ದಿಟ್ಟ ಕ್ರಮ ಕೈಗೊಳ್ಳಬೇಕು: ಭಾರತ

Sumana Upadhyaya
ನವದೆಹಲಿ: ಪಾಕಿಸ್ತಾನದ ಜೈಶ್ ಎ ಮೊಹಮ್ಮದ್ ಉಗ್ರರ ಶಿಬಿರ ತಾಣದ ಮೇಲೆ ಭಾರತೀಯ ವಾಯುಸೇನೆಯ ದಾಳಿಯಿಂದ ಭಾರತ ತನ್ನ ಉದ್ದೇಶಿತ ಗುರಿಯನ್ನು ಈಡೇರಿಸಿಕೊಂಡಿದ್ದು ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವ ದೃಢ ನಿರ್ಧಾರವನ್ನು ದೇಶ ತೆಗೆದುಕೊಂಡಿದೆ ಎಂದು ಹೇಳಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಮಾಧ್ಯಮಗಳೊಂದಿಗೆ ಇಂದು ಮಾತನಾಡಿ, ಭಾರತೀಯ ವಿಮಾನ ಮಿಗ್ -21 ಪಾಕಿಸ್ತಾನದ ಯುದ್ಧ ವಿಮಾನ ಎಫ್-16ನ್ನು ಹೊಡೆದುರುಳಿಸಿದ್ದು ಅದರ ಸಾರಥ್ಯವನ್ನು ಅಭಿನವ್ ವರ್ಥಮಾನ್ ವಹಿಸಿದ್ದರು. ಭಾರತೀಯ ವಾಯುಪಡೆಯ ದಾಳಿಗೆ ಪ್ರತ್ಯಕ್ಷದರ್ಶಿಗಳು ಮತ್ತು ವಿದ್ಯುನ್ಮಾನ ಸಾಕ್ಷಿಗಳಿವೆ ಎಂದರು.
ಅಮ್ರಾಮ್ ಕ್ಷಿಪಣಿಯ ಭಾಗದ ರೂಪದಲ್ಲಿ ನಾವು ವಾಯುಪಡೆಯ ದಾಳಿಯ ಸಾಕ್ಷಿಗಳನ್ನು ಬಹಿರಂಗಪಡಿಸಿದ್ದು ಅದು ದಾಳಿ ನಡೆದ ಸ್ಥಳದಿಂದಲೇ ವಶಪಡಿಸಿಕೊಳ್ಳಲಾಗಿದೆ, ಅದನ್ನು ನಡೆಸಿದ್ದು ಪಾಕಿಸ್ತಾನ ವಾಯುಪಡೆಯ ಎಫ್-16 ವಿಮಾನ ಎಂದು ಹೇಳಿದರು.
ನಮ್ಮ ಮಿಲಿಟರಿಯೇತರ ಭಯೋತ್ಪಾದನೆ ನಿಗ್ರಹ ಉದ್ದೇಶ ಈಡೇರಿದೆ. ಭಯೋತ್ಪಾದನೆ ವಿರುದ್ಧ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಭಾರತದ ನಿಲುವನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು. ಭಾರತದಿಂದ ಕೇವಲ ಒಂದು ಯುದ್ಧ ವಿಮಾನ ನಾಶವಾಗಿದೆ. ಭಾರತದ ಎರಡನೇ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳುವ ಪಾಕಿಸ್ತಾನದ ಬಳಿ ದಾಖಲೆಗಳಿದ್ದರೆ ಅದು ಬಹಿರಂಗಪಡಿಸಿಲ್ಲವೇಕೆ ಎಂದು ಕೇಳಿದರು.
ಪುಲ್ವಾಮಾ ಭಯೋತ್ಪಾದಕ ದಾಳಿ ನಂತರ ಇಡೀ ಅಂತಾರಾಷ್ಟ್ರೀಯ ಸಮುದಾಯ ಭಾರತದ ಪರವಾಗಿ ನಿಂತಿದೆ. ಪುಲ್ವಾಮಾ ದಾಳಿಯನ್ನು ಜೈಶ್ ಎ ಮೊಹಮ್ಮದ್ ಸಂಘಟನೆ ನಡೆಸಿಲ್ಲ ಎಂದು ನಿರಾಕರಿಸುತ್ತಲೇ ಬಂದಿರುವ ಪಾಕ್ ಕ್ರಮ ದುರದೃಷ್ಟಕರ ಎಂದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ತಮ್ಮ ಚಟುವಟಿಕೆಗಳನ್ನು ನಿರ್ಭೀತಿಯಿಂದ ಮುಂದುವರಿಸಿದ್ದು ತನ್ನ ನೆಲದಿಂದ ಭಯೋತ್ಪಾದನೆಯನ್ನು ಕಿತ್ತೊಗೆಯಲು ಇನ್ನು ಮೇಲಾದರೂ ಪಾಕಿಸ್ತಾನ ವಿಶ್ವಾಸಾರ್ಹ, ಪರಿಶೀಲನೆ ಮತ್ತು ನಿರಂತರ ಕ್ರಮವನ್ನು ಮುಂದುವರಿಸಬೇಕು ಎಂದರು.
SCROLL FOR NEXT