ದೇಶ

ರಾಫೆಲ್ ದಾಖಲೆ ಕಳವಾಗಿಲ್ಲ, ಮಾಹಿತಿ ಸೋರಿಕೆಯಷ್ಟೇ: 'ಕೇಂದ್ರ' ಯೂ ಟರ್ನ್!

Srinivasamurthy VN
ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದ್ದ ರಾಫೆಲ್ ಒಪ್ಪಂದ ದಾಖಲೆ ಪತ್ರಗಳು ಕಳವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಟ್ವಿಸ್ಟ್ ನೀಡಿದ್ದು, ರಾಫೆಲ್ ದಾಖಲೆಗಳು ಕಳವಾಗಿಲ್ಲ ಬದಲಿಗೆ ಸೋರಿಕೆಯಾಗಿದೆ ಎಂದು ಯೂಟರ್ನ್ ಹೊಡೆದಿದೆ.
ಈ ಬಗ್ಗೆ ಕೋರ್ಟ್ ಗೆ ಮತ್ತೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, 'ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳುವಾಗಿಲ್ಲ. ಮೂಲ ದಾಖಲೆಗಳ ಫೋಟೊಕಾಪಿಗಳನ್ನು ಅಕ್ರಮವಾಗಿ ರಕ್ಷಣಾ ಸಚಿವಾಲಯದ ಹೊರಗಿನವರಿಗೆ ನೀಡಲಾಗಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ತಾವು ಮಂಡಿಸಿದ್ದ ವಾದವನ್ನು ತಪ್ಪಾಗಿ ಅರ್ಥೈಸಲಾಗಿದ್ದು, ದಾಖಲೆಗಳು ಕಳವಾಗಿದೆ ಎಂದು ನಾನು ಹೇಳಿಲ್ಲ. ಆದರೆ ದಾಖಲೆಗಳಲ್ಲಿನ ಮಾಹಿತಿಗಳನ್ನು ಫೋಟೋಕಾಪಿ ಮೂಲಕ ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದೆ ಎಂದು ಅಟಾರ್ನಿ ಜನರಲ್‌ ಸ್ಪಷ್ಟಪಡಿಸಿದ್ದಾರೆ.
ಇನ್ನು ಕಳೆದ ವಾರವಷ್ಟೇ ರಫೇಲ್‌ ದಾಖಲೆಗಳು ರಕ್ಷಣಾ ಇಲಾಖೆಯ ಬಳಿ ಇಲ್ಲ ಎಂಬ ಮಾಹಿತಿ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು, ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ವಿಪಕ್ಷಗಳು, ದೇಶದ ಮಹತ್ವದ ಒಪ್ಪಂದದ ದಾಖಲೆಗಳಿಗೇ ಭದ್ರತೆ ನೀಡಲಾಗದ ಸರ್ಕಾರ ದೇಶಕ್ಕೆ ಏನು ಭದ್ರತೆ ಒದಗಿಸುತ್ತದೆ ಎಂದು ಟೀಕಿಸಿದ್ದರು. ಈ ಟೀಕೆಗಳ ಸರಮಾಲೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ದಾಖಲೆ ಕಳವಾಗಿಲ್ಲ ಎಂಬುದನ್ನು ಅಟಾರ್ನಿ ಜನರವ್ ಅವರ ಮೂಲಕ ಹೇಳಿಸಿದೆ.
ಈ ಮಧ್ಯೆ, ಕೋರ್ಟ್‌ನಲ್ಲಿ 'ಕಳವು' ಪದ ಪ್ರಯೋಗವು ಗಂಭೀರ ಸ್ವರೂಪದ್ದಾಗಿದ್ದು, ಅಟಾರ್ನಿ ಜನರಲ್‌ ಅವರು ಆ ಪದ ಬಳಕೆಯನ್ನು ತಪ್ಪಿಸಬೇಕಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 
(ಪಿಟಿಐ ಮಾಹಿತಿ ಆಧಾರಿತ)
SCROLL FOR NEXT