ದೇಶ

ಪ್ರಧಾನಿ ಮೋದಿ ದೇಶದ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ: ಸೋನಿಯಾ ಗಾಂಧಿ

Lingaraj Badiger
ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಬಲಿಪಶುವಿನಂತೆ ನಟಿಸಲು ಯತ್ನಿಸುತ್ತಿದ್ದಾರೆ. ಆದರೆ ನಿಜವಾದ ಬಲಿಪಶುಗಳು ಜನ. ದೇಶದ ಜನರನ್ನು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಆರೋಪಿಸಿದ್ದಾರೆ.
ಇಂದು ಮೋದಿ ತವರು ಗುಜರಾತ್ ನ ಸಾಬರಮತಿ ಅಶ್ರಮದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸೋನಿಯಾ, ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿಮಾಡಿಕೊಂಡಿದ್ದು, ತಾವೇ ಬಲಿಪಶು ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ ಈ ದೇಶದ ಜನರು ನಿಜವಾದ ಬಲಿಪಶುಗಳು ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಮುಖಂಡರಾದ ಎ.ಕೆ.ಆಂಟನಿ, ಗುಲಾಮ್‌ ನಬಿ ಆಜಾದ್‌, ಅಹ್ಮದ್‌ ಪಟೇಲ್‌, ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೊಟ್‌, ಛತ್ತೀಸ್‌ಗಢ ಸಿಎಂ ಭೂಪೇಶ್‌ ಬಘೇಲ್‌, ಪುದುಚೆರಿ ಸಿಎಂ ವಿ.ನಾರಾಯಣಸಾಮಿ, ತರುಣ್‌ ಗೊಗೊಯಿ, ಹರೀಶ್ ರಾವತ್‌ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಪಕ್ಷದ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಿಯಾಂಕಾ ವಾದ್ರಾ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಇಂದು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಿಯಾಂಕಾ ವಾದ್ರಾ ತಮ್ಮ ಮೊದಲ ಭಾಷಣ ಮಾಡಲಿದ್ದಾರೆ.  ಕಾರ್ಯಕಾರಿ ಸಮಿತಿ ಸಭೆ ಬಳಿಕ ಗಾಂಧಿನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ರ್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಿಯಾಂಕಾ ವಾದ್ರಾ ಭಾಷಣ ಮಾಡಲಿದ್ದಾರೆ.
SCROLL FOR NEXT