ದೇಶ

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಸಾವು

Lingaraj Badiger
ಹೈದರಾಬಾದ್: ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಗರದ ಮಸೀದಿ ಮೇಲೆ ನಡೆದ ಭೀಕರ ಗುಂಡಿನ ದಾಳಿಯ ನಂತರ ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಮೃತಪಟ್ಟಿದ್ದಾರೆ.
ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೈದರಾಬಾದ್ ಮೂಲದ  ಫರಾಜ್ ಅಹ್ಸಾನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಶನಿವಾರ ಖಚಿತಪಡಿಸಿದೆ.
ನ್ಯೂ ಇಂಡಿಯನ್ ಎಕ್ರ್ ಪ್ರೆಸ್ ಜತೆ ಮಾತನಾಡಿದ ಫರಾಜ್ ಸಹೋದರ ಕಾಶಿಫ್ ಅಹ್ಸಾನ್ ಅವರು, ಫರಾಜ್ ಮೃತಪಟ್ಟಿದ್ದಾರೆ ಎಂದು ಈಗತಾನೇ ಅವರ ಪತ್ನಿ ಇನ್ಶಾ ತಿಳಿಸಿದ್ದಾರೆ. ನಾವು ಸಂಬಂಧಿಕರು ನ್ಯೂಜಿಲೆಂಡ್ ತೆರಳಬೇಕೋ ಅಥವಾ ಮೃತದೇಹ ಇಲ್ಲಿಗೆ ಬರುವವರೆಗೆ ಕಾಯಬೇಕೋ ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಉಗ್ರ ದಾಳಿಯಲ್ಲಿ ತೆಲಂಗಾಣದ ಕರೀಂನಗರ ನಿವಾಸಿ ಇಮ್ರಾನ್ ಅಹ್ಮದ್ ಖಾನ್ ಅವರು ಸಹ ಮೃತಪಟ್ಟಿದ್ದು, ಅವರ ಅಂಕಲ್ ಮಂಜೂರ್ ಅಹ್ಮದ್ ಖಾನ್ ನ್ಯೂಜಿಲೆಂಡ್ ಗೆ ತೆರಳಿರುವುದಾಗಿ ಅವರ ಕುಟುಂಬ ತಿಳಿಸಿದೆ.
ಈ ಮಧ್ಯೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಹೈದರಾಬಾದ್‌ ಮೂಲದ ಅಹ್ಮದ್‌ ಜಹಾಂಗೀರ್‌ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿನ್ನೆಯಷ್ಟೆ ಮಸೀದಿ ಮೇಲೆ ನಡೆದ ಗುಂಡಿನ ದಾಳಿಯ ನಂತರ ಭಾರತೀಯ ಮೂಲದ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ನ್ಯೂಜಿಲೆಂಡ್ ನಲ್ಲಿರುವ ಭಾರತೀಯ ರಾಯಭಾರಿ ಸಂಜೀವ್ ಕೊಹ್ಲಿ ಅವರು ಟ್ವೀಟ್ ಮಾಡಿದ್ದರು.
ಶುಕ್ರವಾರ ಬೆಳಗ್ಗೆ ದಕ್ಷಿಣ ಐಲೆಂಡ್ ಮತ್ತು ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 49 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದೀಗ ಇಬ್ಬರು ಭಾರತೀಯರ ಸಾವಿನ ನಂತರ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
SCROLL FOR NEXT