ದೇಶ

'ಫನಿ' ಅಲ್ಲ 'ಫೋನಿ'... 2 ದಶಕದ ಬಳಿಕ ಭೀಕರ ಅವಾಂತರ ಸೃಷ್ಟಿಗೆ ಕಾರಣವಾಗಿರುವ ಚಂಡಮಾರುತದ ವಿವರ!

Srinivasamurthy VN
ನವದೆಹಲಿ: ಒಡಿಶಾದಲ್ಲಿ 2 ದಶಕಗಳ ಬಳಿಕ ಭೀಕರ ಅವಾಂತರ ಸೃಷ್ಟಿಗೆ ಕಾರಣವಾಗಿರುವ ಫನಿ ಚಂಡಮಾರುತ ಇನ್ನು ಕೆಲವೇ ಕ್ಷಣಗಳಲ್ಲಿ ಒಡಿಶಾ ತೀರಕ್ಕೆ ಅಪ್ಪಳಿಸಲಿದ್ದು, ಈ ಭೀಕರ ಚಂಡಮಾರುತದ ಕೆಲ ಕುತೂಹಲಕಾರಿ ಅಂಶಗಳು ಇಲ್ಲಿವೆ.
ಆಗ್ನೇಯ ಏಷ್ಯಾದಲ್ಲಿ ಚಂಡಮಾರುತಗಳಿಗೆ ಹೆಸರಿಡುವುದು ಒಂದು ಸಾಮಾನ್ಯ ಪ್ರಕ್ರಿಯೆ. ವಿಶ್ವ ಹವಾಮಾನ ಸಂಸ್ಥೆಯು ಚಂಡಮಾರುತಗಳಿಗೆ ಹೆಸರು ಸೂಚಿಸುವಂತೆ ರಾಷ್ಟ್ರಗಳಿಗೆ ಸೂಚಿಸುವ ಪದ್ಧತಿ ಇದೆ. ಆಗ್ನೇಯ ಏಷ್ಯಾದಲ್ಲಿ ದೇಶಗಳು ಸೂಚಿಸುವ ಹೆಸರುಗಳಿಂದ ಅವುಗಳನ್ನು ಕರೆಯಲಾಗುತ್ತದೆ. ಈ ಸಲ ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮನ್‌, ಪಾಕಿಸ್ತಾನ, ಶ್ರೀಲಂಕಾ ಮತ್ತು ಥಾಯ್ಲೆಂಡ್ ಗಳು ತಲಾ ಎಂಟರಂತೆ 64 ಹೆಸರುಗಳನ್ನು ಕಳುಹಿಸಿದ್ದವು. ಅದರಲ್ಲಿ ಬಾಂಗ್ಲಾದೇಶ ಸೂಚಿಸಿದ 'ಫನಿ'(ಎಫ್‌ಎಎನ್‌ಐ) ಆಯ್ಕೆ ಮಾಡಲಾಗಿದೆ. ಫನಿ ಎಂದರೆ ಹಾವಿನ ಹೆಡೆ ಎಂದರ್ಥ. ಹವಾಮಾನ ಇಲಾಖೆಯು ಇದನ್ನು 'ಫೊನಿ' ಎಂದು ಉಚ್ಛರಿಸಲಾಗುತ್ತದೆ ಎಂಬ ಸ್ಪಷ್ಟನೆ ನೀಡಿದ್ದರಿಂದ ಹಾಲಿ ಚಂಡಮಾರುತವನ್ನು 'ಫೊನಿ' ಎಂದು ಕರೆಯಲಾಗುತ್ತಿದೆ. 
ಇಂದು ಭಾರತದ ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಲಿರುವ 'ಫೋನಿ' ಯ ಇವತ್ತಿನ ವೇಗ ಗಂಟೆಗೆ 200 ಕಿ.ಮೀ.. 'ಫೋನಿ'ಯನ್ನು ಸಮರ್ಥವಾಗಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿರುವ ಒಡಿಶಾ ಅದಕ್ಕಾಗಿಯೇ 880ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳನ್ನು ತೆರೆದಿದೆ. ಇವುಗಳಲ್ಲಿ ಏಕ ಕಾಲಕ್ಕೆ 10 ಲಕ್ಷ ಜನರಿಗೆ ವಸತಿ ಮತ್ತು ಆಹಾರ ಕಲ್ಪಿಸುವ ಅವಕಾಶವಿದೆ. 
ಇನ್ನು ಫೋನಿ ಚಂಡಮಾರುತ ಭೂ ಭಾಗಕ್ಕೆ ಅಪ್ಪಳಿಸುವಾಗ ಅದರ ವೇಗ ಗಂಟೆಗೆ 170–180 ಕಿ.ಮೀ ಇರುವ ಸಾಧ್ಯತೆಗಳಿವೆ. ಅದು 200ಕ್ಕೂ ತಲುಪಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 'ಫೋನಿ'  ಚಂಡಮಾರುತದಿಂದಾಗಿ ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ಸೋಮವಾರ ರಾತ್ರಿಯಿಂದಲೇ ಭಾರಿ ಮಳೆ ಸುದಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಂಗಾಳ ಕೊಲ್ಲಿಯ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸದಂತೆ ಈಗಾಗಲೇ ಮೀನುಗಾರರಿಗೆ ಸೂಚನೆ ನೀಡಲಾಗಿದೆ. 
ಪುರಿಯಿಂದ 450 ಕಿ.ಮೀ ದೂರದಲ್ಲಿರುವ ಚಂಡಮಾರುತವು ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಒಡಿಶಾ ಕರಾವಳಿಯ ಗೋಪಾಲಪುರ ಮತ್ತು ಚಾಂದಬಾಲಿ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 14 ಜಿಲ್ಲೆಗಳು ಹಾನಿ ಎದುರಿಸಲಿದ್ದು, ಅಪಾಯದ ಪ್ರದೇಶದ ನಿವಾಸಿಗಳ ತೆರವು ಕಾರ್ಯಾಚರಣೆ ಶರವೇಗದಲ್ಲಿ ನಡೆಯುತ್ತಿದೆ. ಒಡಿಶಾದಲ್ಲಿ ಶನಿವಾರದವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಫೋನಿ ಪ್ರಭಾವ ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲೂ ಇರಲಿದೆ. 
1891–2017ರ ವರೆಗೆ ಬಂಗಾಳ ಕೊಲ್ಲಿಯಲ್ಲಿ, ಏಪ್ರಿಲ್‌ ತಿಂಗಳಲ್ಲಿ ಕೇವಲ 14 ಸೈಕ್ಲೋನ್‌ ಗಳು ಉದ್ಭವಗೊಂಡಿದ್ದು ಅದರಲ್ಲಿ ಒಂದು ಮಾತ್ರ ಭಾರತದ ಭೂ ಭಾಗದ ಕಡೆಗೆ ಬಂದಿತ್ತು. ಇದೀಗ 'ಫೋನಿ' ಚಂಡಮಾರುತ ಕೂಡ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿ ಆ ಬಳಿಕ ಮುಂದಕ್ಕೆ ಸಾಗಲಿದೆ.  ಈ ಹಿದೆ 2008ರಲ್ಲಿ ರೂಪುಗೊಂಡಿದ್ದ ನರ್ಗಿಸ್‌ ಚಂಡಮಾರುತ ಮಯನ್ಮಾರ್‌ ನಲ್ಲಿ ದಾಂಧಲೆ ಸೃಷ್ಟಿ ಮಾಡಿತ್ತು. 
SCROLL FOR NEXT