ದೇಶ

ಶೋಪಿಯಾನ್ ಎನ್ ಕೌಂಟರ್: ಗಾಯಗೊಂಡಿದ್ದ ಮತ್ತೋರ್ವ ಯೋಧ ಹುತಾತ್ಮ

Srinivasamurthy VN
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದಿದ್ದ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಮತ್ತೋರ್ವ ಯೋಧ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಹುತಾತ್ಮ ಯೋಧನನ್ನು ರೋಹಿತ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸೇನಾ ವಕ್ತಾರರು ಮಾಹಿತಿ ನೀಡಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ರೋಹಿತ್ ಕುಮಾರ್ ಯಾದವ್ ಗೆ ಗುಂಡೇಟು ತಗುಲಿತ್ತು. ಕೂಡಲೇ ಅವರನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರೋಹಿತ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ  ಎಂದು ಹೇಳಿದ್ದಾರೆ.
ಅಂತೆಯೇ ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದು, ಮೃತ ಉಗ್ರರನ್ನು ಯವಾರ್ ಅಹ್ಮದ್ ದಾರ್, ಶಕೀಲ್ ಅಹ್ಮದ್ ದಾರ್ ಮತ್ತು ಇಷ್ತಿಯಾಕ್ ಭಟ್ ಎಂದು ಗುರುತಿಸಲಾಗಿದೆ. ಮೃತ ಉಗ್ರರೆಲ್ಲರೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ದಾಖಲೆಗಳ ಪ್ರಕಾರ ಯವಾರ್ ದಾರ್ ಕಣಿವೆ ರಾಜ್ಯದಲ್ಲಿ ನಡೆದ ವಿವಿಧ ಉಗ್ರದಾಳಿಗಳಲ್ಲಿ ಪಾಲ್ಗೊಂಡಿದ್ದ. ಅಂತೆಯೇ ತನ್ನ ಉಗ್ರ ಕೃತ್ಯಗಳಿಗಾಗಿ ಹಲವು ಅಮಾಯಕ ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿಕೊಂಡಿದ್ದ. ಅಂತೆಯೇ ಕಳೆದ ವರ್ಷ ಝೈನಾಪೋರಾ ಪೊಲೀಸ್ ಠಾಣೆ ಮೇಲೆ ನಡೆದಿದ್ದ ದಾಳಿಯಲ್ಲೂ ಯವಾರ್ ದಾರ್ ಕೈವಾಡವಿತ್ತು. ಈ ದಾಳಿಯಲ್ಲಿ ನಾಲ್ಕು ಮಂದಿ ಪೊಲೀಸರು ಸಾವನ್ನಪ್ಪಿದ್ದರು.
SCROLL FOR NEXT