ದೇಶ

ಲಂಡನ್ ಆಸ್ತಿ ಹಗರಣ; ವಾದ್ರಾ ನಿರೀಕ್ಷಣಾ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾಲಯ ಅರ್ಜಿ

Nagaraja AB

ನವದೆಹಲಿ: ಲಂಡನ್ ಮೂಲದ ಆಸ್ತಿ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವ ಉತ್ತರಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ.

ರಾಬರ್ಟ್ ವಾದ್ರಾ ವಿರುದ್ಧದ  ಅಕ್ರಮ ಹಣಕಾಸು ತಡೆ ಕಾಯ್ದೆಯಡಿ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಶುಕ್ರವಾರ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ವಾದ್ರಾ ಅವರು ಲಂಡನ್ ನ ಬೈರನ್ ಸ್ಟನ್ ಸ್ಕ್ವೇರ್ ನಲ್ಲಿ 1.9 ದಶಲಕ್ಷ ಪೌಂಡ್ ಮೊತ್ತದ ಆಸ್ತಿ ಖರೀದಿಯಲ್ಲಿ ಹಣಕಾಸಿನ ಅಕ್ರಮ ನಡೆಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.
ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯ ಉದ್ಯೋಗಿ ಮನೋಜ್ ಅರೋರ ಈ ಪ್ರಕರಣದ ರೂವಾರಿಯಾಗಿದ್ದಾರೆ. ಅರೋರ ಅವರಿಗೆ ಈ ಅಘೋಷಿತ ಸಾಗರೋತ್ತರ ಆಸ್ತಿ ಖರೀದಿ ಕುರಿತು ಮಾಹಿತಿಯಿದ್ದು, ಹಣ ಕ್ರೋಢಿಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದಕ್ಕಾಗಿ ಸಂಯುಕ್ತ ಅರಬ್ ಒಕ್ಕೂಟದಿಂದ ಹಣವನ್ನು ಸಂಗ್ರಹಿಸಲಾಗಿದೆ.
ಜೊತೆಗೆ, ವಾದ್ರಾ ವಿರುದ್ಧದ ಹರಿಯಾಣದ ಗುರುಗ್ರಾಮದ ನ ಭೂ ಅಕ್ರಮದಲ್ಲಿ ಇವರ ಪಾತ್ರವಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಈ ಸಂಬಂಧ 2018ರ ಸೆಪ್ಟೆಂಬರ್ ನಲ್ಲಿ ವಾದ್ರಾ ಹಾಗೂ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ವಿರುದ್ಧ ಎಫ್ ಐಆರ್ ದಾಖಲಾಗಿತ್ತು.
ವಾದ್ರಾ ವಿರುದ್ದ 2008ರಲ್ಲಿ ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯ ಮೂಲಕ ಶಿಕೋಪುರ ಗ್ರಾಮದ 3.5 ಎಕರೆ ಜಮೀನನ್ನು ಮಾರುಕಟ್ಟೆ ದರಕ್ಕಿಂತ ಅತಿ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ ಆರೋಪಗಳಿವೆ.
SCROLL FOR NEXT