ದುರ್ಘಟನೆ ನಡೆದ ಸೂರತ್ ನ ಸ್ಥಳ
ಸೂರತ್: ಬೃಹತ್ ಪ್ರಮಾಣದಲ್ಲಿ ಅಗ್ನಿ ಅವಘಡವುಂಟಾಗಿ 20 ಮಂದಿ ವಿದ್ಯಾರ್ಥಿಗಳ ಸಾವು ಮತ್ತು ಹಲವರಿಗೆ ಗಾಯಗಳಾದ ಪ್ರಕರಣದ ನಂತರ ಪೊಲೀಸರು ಸೂರತ್ ಕೋಚಿಂಗ್ ಸೆಂಟರ್ ನ ಮಾಲೀಕನನ್ನು ಬಂಧಿಸಿದ್ದಾರೆ.
ಬೆಂಕಿ ಅವಘಡ ಸಂಭವಿಸಿದ ಸೂರತ್ ನ ಸರ್ತಾನ ಪ್ರದೇಶದಲ್ಲಿರುವ ತಕ್ಷಶಿಲಾ ವಾಣಿಜ್ಯ ಸಂಕೀರ್ಣದ ಇಬ್ಬರು ಬಿಲ್ಡರ್ ಗಳು ತಲೆಮರೆಸಿಕೊಂಡಿದ್ದಾರೆ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮ ಸುದ್ದಿಗಾರರಿಗೆ ಇಂದು ತಿಳಿಸಿದ್ದಾರೆ.
ವಾಣಿಜ್ಯ ಸಂಕೀರ್ಣದ ಮೇಲ್ಮಹಡಿಯಲ್ಲಿ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸದ್ಯ ಅಲ್ಲಿ ಟ್ಯೂಷನ್ ತರಗತಿಗಳನ್ನು ನಿಲ್ಲಿಸಲಾಗಿದೆ, ಸಂಬಂಧಪಟ್ಟ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡ ನಂತರ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರ ಸಿಕ್ಕಿದ ನಂತರವಷ್ಟೇ ಟ್ಯೂಷನ್ ಗಳನ್ನು ಮತ್ತೆ ಆರಂಭಿಸಬಹುದಾಗಿದೆ ಎಂದು ಸತೀಶ್ ಶರ್ಮ ತಿಳಿಸಿದ್ದಾರೆ.
ಪೊಲೀಸರು ಕಾಂಪ್ಲೆಕ್ಸ್ ನ ಬಿಲ್ಡರ್ ಗಳಾದ ಹರ್ಷಲ್ ವೆಕಾರಿಯಾ ಮತ್ತು ಜಿಗ್ನೇಶ್ ಮತ್ತು ಕೋಚಿಂಗ್ ಸೆಂಟರ್ ನ ಮಾಲೀಕ ಭಾರ್ಗವ್ ಬತನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ, ನಾವು ಈಗಾಗಲೇ ಬತನಿಯನ್ನು ಬಂಧಿಸಿದ್ದು ಉಳಿದಿಬ್ಬರ ಬಂಧನಕ್ಕೆ ಶೋಧ ನಡೆಸುತ್ತಿದ್ದೇವೆ ಎಂದರು.
ದುರ್ಘಟನೆ ನಡೆದ ಸಂದರ್ಭದಲ್ಲಿ ಅಲ್ಲಿ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸುಮಾರು 50 ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದ್ದು ಕಾರಣ ತಕ್ಷಣಕ್ಕೆ ಪತ್ತೆಯಾಗಿಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos