ದೇಶ

ನೆಹರು, ರಾಜೀವ್ ರಂತೆ ಮೋದಿ ವರ್ಚಸ್ವಿ ನಾಯಕ; ರಾಹುಲ್ ರಾಜಿನಾಮೆ ಸರಿಯಲ್ಲ: ರಜನಿಕಾಂತ್

Srinivasamurthy VN
ಚೆನ್ನೈ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನಿಂದಾಗಿ ರಾಜಿನಾಮೆ ನಿರ್ಧಾರ ಮಾಡಿರುವ ರಾಹುಲ್ ಗಾಂಧಿ ಅವರ ನಿರ್ಧಾರ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಸರ್ಕಾರ ಮಾತ್ರವಲ್ಲ, ಬಲಿಷ್ಠ ವಿಪಕ್ಷದ ಅಗತ್ಯವೂ ಇದೆ ಎಂದು ಖ್ಯಾತ ಸೂಪರ್ ಸ್ಟಾರ್ ನಟ ರಜನಿಕಾಂತ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ತಮ್ಮದೇ ನೂತನ ಪಕ್ಷದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿರುವ ರಜನಿಕಾಂತ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬೆನ್ನಿಗೆ ನಿಂತಿದ್ದು, ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ರಾಹುಲ್ ಗಾಂಧಿ ರಾಜಿನಾಮೆ ನಿರ್ಧಾರ ತಳೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಂತೆಯೇ ರಾಹುಲ್ ಗಾಂಧಿಗೆ ಕಿವಿಮಾತು ಹೇಳಿರುವ ಅವರು, ರಾಹುಲ್ ತಾವು ಸಮರ್ಥರು ಎಂಬುದನ್ನು ತೋರಿಸಬೇಕು. ಪ್ರಜಾ ಪ್ರಭುತ್ವದಲ್ಲಿ ಸಮರ್ಥ ಸರ್ಕಾರ ಮಾತ್ರವಲ್ಲ, ಸಮರ್ಥ ಮತ್ತ ಬಲಿಷ್ಠ ವಿಪಕ್ಷದ ಅಗತ್ಯವೂ ಇದೆ. ಹೀಗಾಗಿ ರಾಹುಲ್ ಗಾಂಧಿ ರಾಜಿನಾಮೆ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾತನಾಡಿದ ರಜನಿಕಾಂತ್, ಇದು ಬಿಜೆಪಿ ಜಯವಲ್ಲ. ಇದು ಮೋದಿ ಗೆಲುವು ಎಂದು ಲೋಕಸಭಾ ಚುನಾವಣೆ ಫಲಿತಾಂಶವನ್ನು ಬಣ್ಣಿಸಿದರು. ರಾಜೀವ್ ಗಾಂಧಿ, ನೆಹರೂ ರಂತಹ ನಾಯಕರ ಬಳಿಕ ಇದೀಗ ಮೋದಿ ಕೂಡ ತಮ್ಮದೇ ಆದ ವರ್ಚಸ್ಸಿನ ಮೂಲಕ ಮತದಾರರ ಮನ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಪ್ರಮಾಣ ವಚನಕ್ಕೆ ನಾನೂ ಕೂಡ ಹೋಗುತ್ತೇನೆ
ಇನ್ನು ಇದೇ ಮೇ 30 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಬಂದಿದ್ದು, ನಾನೂ ಕೂಡ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ರಜನಿಕಾಂತ್ ರಂತೆಯೇ ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನಟ ಮತ್ತು ಎಂಎನ್ಎಂ ಪಕ್ಷ ಸಂಸ್ಥಾಪಕ ಕಮಲ್ ಹಾಸನ್ ಅವರಿಗೂ ಆಹ್ವಾನ ನೀಡಲಾಗಿದೆ. ಆದರೆ ಈ ಬಗ್ಗೆ ಕಮಲ್ ಹಾಸನ್ ಈ ವರೆಗೂ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. 
SCROLL FOR NEXT