ದೇಶ

ಜಮ್ಮು ಸೇನಾ ಕ್ಯಾಂಪ್ ಬಳಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಸೇನೆ!

Srinivasamurthy VN
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇಬ್ಬರು ಶಂಕಿತ ಉಗ್ರರನ್ನು ಭಾರತೀಯ ಸೇನಾಪಡೆಗಳು ಬಂಧಿಸಿದೆ ಎಂದು ತಿಳಿದುಬಂದಿದೆ.
ಸೇನಾ ಮೂಲಗಳ ಪ್ರಕಾರ ಜಮ್ಮುವಿನ ರತ್ನಚುಕ್ ಸೇನಾ ಕ್ಯಾಂಪ್ ಬಳಿ ಶಂಕಿತ ಉಗ್ರರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು, ಸೇನಾ ಕ್ಯಾಂಪ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಇನ್ನು ಬಂಧಿತರು ರತ್ನಚುಕ್ ಸೇನಾ ಕ್ಯಾಂಪ್ ಅನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅನುಮಾನಗೊಂಡ ಭದ್ರತಾ ಪಡೆಗಳು ಅವರನ್ನು  ಬಂಧಿಸಿ ರಹಸ್ಯ ಪ್ರದೇಶದಲ್ಲಿ ತೀವ್ರ ವಿಚಾರಣೆಗೊಳಪಡಿಸಿದೆ. ಇನ್ನು ಬಂಧಿತರನ್ನು ಕಥುವಾ ನಿವಾಸಿ ಮುಷ್ತಾಕ್ ಅಹ್ಮದ್ ಮತ್ತು ರಜೌರಿ ನಿವಾಸಿಯಾದ ನಸೀಮ್ ಅಖ್ತರ್ ಎಂದು ಗುರುತಿಸಲಾಗಿದೆ.
ಬಂಧಿತರ ಬ್ಯಾಗ್ ನಲ್ಲಿ ಮಿಲಿಟರಿ ಬೇಸ್ ಮ್ಯಾಪ್ ಮತ್ತು ಫೋಟೋಗಳು
ಇನ್ನು ಬಂಧಿತ ಶಂಕಿತ ಉಗ್ರರ ಬ್ಯಾಗ್ ನಲ್ಲಿ ರತ್ನಚುಕ್ ಸೇನಾ ಕ್ಯಾಂಪ್ ನ ಮ್ಯಾಪ್ ಮತ್ತು ಫೋಟೋಗಳು ಲಭ್ಯವಾಗಿವೆ ಎನ್ನಲಾಗಿದೆ. ಇದಲ್ಲದೆ ಕೆಲ ವಿಡಿಯೋಗಳೂ ಕೂಡ ಲಭ್ಯವಾಗಿದ್ದು, ಈ ವಿಡಿಯೋ ಮತ್ತು ಫೋಟೋಗಳನ್ನು ಶಂಕಿತರು ಪಾಕಿಸ್ತಾನಕ್ಕೆ ರವಾನೆ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಇಬ್ಬರೂ ಬಂಧಿತರಿಂದ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರೂ ಇತ್ತೀಚೆಗಷ್ಟೇ ಪಾಕಿಸ್ತಾನ ಮೂಲದ ವ್ಯಕ್ತಿಯೊಂದಿಗೆ ಮಾತನಾಡಿರುವ ಮತ್ತು ಪಾಕ್ ಮೂಲದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಅಧಿಕಾರಿಗಳು ಇಬ್ಬರೂ ಶಂಕಿತರನ್ನು ರಹಸ್ಯ ಪ್ರದೇಶದಲ್ಲಿಟ್ಟು ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ.
SCROLL FOR NEXT