ದೇಶ

ಮೋದಿ 2.0 ಸಂಪುಟದಲ್ಲಿ ರಾಜ್ಯದ ಯಾರಿಗೆಲ್ಲಾ ಮಂತ್ರಿ ಸ್ಥಾನ? ಇಲ್ಲಿದೆ ಮಾಹಿತಿ!

Sumana Upadhyaya
ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2 ಸರ್ಕಾರ ಗುರುವಾರ ಅಸ್ಥಿತ್ವಕ್ಕೆ ಬರಲಿದೆ. ಇಂದು ಸಾಯಂಕಾಲ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ನರೇಂದ್ರ ಮೋದಿಯಾಗಿ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ಕೊನೆಯ ಕ್ಷಣದವರೆಗೂ ಮೋದಿ ಸಂಪುಟದಲ್ಲಿ ಯಾರ್ಯಾರು ಸಚಿವರಾಗುತ್ತಾರೆ, ಯಾರಿಗೆ ಯಾವ ಹುದ್ದೆ ಎಂಬ ಕುತೂಹಲ ಮನೆಮಾಡಿದೆ.
ಈ ಮಧ್ಯೆ ಕರ್ನಾಟಕದಿಂದ ನಾಲ್ವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ ವಿ ಸದಾನಂದ ಗೌಡ, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಇಂದು ಸಂಜೆ 4.30ಕ್ಕೆ ದೆಹಲಿಯ ಪ್ರಧಾನಿ ನಿವಾಸಕ್ಕೆ ಆಗಮಿಸುವಂತೆ ಅಮಿತ್ ಶಾ ಅವರಿಂದ ಕರೆ ಬಂದಿದೆ.
ಈ ಮೂವರಿಗೆ ಲಿಂಗಾಯತ, ಬ್ರಾಹ್ಮಣ ಹಾಗೂ ಒಕ್ಕಲಿಗ ಕೋಟಾದಲ್ಲಿ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಕೂಡ ರಾಜ್ಯದಿಂದಲೇ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇನ್ನು ತಮಗೆ ಸಚಿವ ಸ್ಥಾನ ಸಿಗುವ ವಿಚಾರವನ್ನು ಸ್ವತಃ ಸಂಸದ ಡಿ ವಿ ಸದಾನಂದ ಗೌಡ ಅವರೇ ಖಚಿತಪಡಿಸಿದ್ದಾರೆ. ನನಗೆ ಖುದ್ದು ಅಮಿತ್ ಶಾ ಅವರೇ ಕರೆ ಮಾಡಿ ಪ್ರಧಾನಿಯವರ ನಿವಾಸದಲ್ಲಿ ಸಂಜೆ 5ಗಂಟೆಯೊಳಗೆ ಇರಬೇಕೆಂದು ಸೂಚಿಸಿದ್ದಾರೆ. ಪ್ರಧಾನಿ ನಿವಾಸದಲ್ಲಿ ಸಂಜೆ ಚಹಾ ಕೂಟ ನಡೆಸಿ ಅಲ್ಲಿಂದ ನೇರವಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರಮಾಣವಚನ ಸ್ವೀಕರಿಸಲಿದ್ದೇವೆ ಎಂದು ಸದಾನಂದ ಗೌಡ ತಿಳಿಸಿದ್ದಾರೆ.

ಉತ್ತರಪ್ರದೇಶದ ಸಂಸದ ಮುಕ್ತಾರ್​ ಅಬ್ಬಾಸ್​ ನಖ್ವಿ, ಅಮೇಥಿಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯನ್ನು ಸೋಲಿಸಿದ ಸಂಸದೆ ಸ್ಮೃತಿ ಇರಾನಿ, ಮಾಜಿ ಗೃಹಖಾತೆ ಸಚಿವ ರಾಜ್​ನಾಥ್ ಸಿಂಗ್, ಮಧ್ಯಪ್ರದೇಶದ ಸಂಸದ ಪ್ರಹ್ಲಾದ್ ಪಟೇಲ್, ಮಹಾರಾಷ್ಟ್ರ ಸಂಸದರಾದ ಪ್ರಕಾಶ್ ಜಾವ್ಡೇಕರ್, ರಾಮ್​ದಾಸ್ ಅಠಾವಳೆ, ಪಿಯೂಶ್ ಗೋಯಲ್.

ಬಿಹಾರದ ಸಂಸದ ಶಂಕರ್ ಪ್ರಸಾದ್, ಜಮ್ಮು-ಕಾಶ್ಮೀರದ ಡಾ. ಜೀತೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಬಾಬುಲ್ ಸುಪ್ರಿಯೋ, ತೆಲಂಗಾಣದ ಸಂಸದ ಕೃಷ್ಣ ರೆಡ್ಡಿ ಚಂಡಿಘಡ್​ನ ಹರ್ಷಿಮ್ರತ್ ಕೌರ್ ಬಾದಲ್ ಹಾಗೂ ಗುಜರಾತ್ ರಾಜ್ಯಸಭಾ ಸದಸ್ಯರಾದ ಪುರುಷೋತ್ತಮ್ ರುಪಾಲ ಮನ್ಸುಕ್ ಎಲ್. ಮಾಂಡವಿಯಾ ಅವರಿಗೆ ಕೂಡ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ.ಇವರಿಗೆಲ್ಲಾ ಅಮಿತ್ ಶಾ ಅವರಿಂದ ಸಂಜೆ ಪ್ರಧಾನಿ ನಿವಾಸಕ್ಕೆ ಬರುವಂತೆ ಬುಲಾವ್ ಹೋಗಿದೆ.
ಇಂದು ಬೆಳಗ್ಗೆ ನೂತನ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಸಂಸದರ ಪಟ್ಟಿ ಮಾಡಿ ರಾಷ್ಟ್ರಪತಿ ಭವನಕ್ಕೆ ಕಳುಹಿಸುವ ಮುನ್ನ ಪ್ರಧಾನಿ ಮೋದಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ ಅಂತಿಮ ಸುತ್ತಿನ ಸಮಾಲೋಚನೆ ನಡೆಸಿದ್ದಾರೆ. ನೂತನ ಸಚಿವರುಗಳ ಪಟ್ಟಿ ಇನ್ನು ಕೆಲವೇ ಹೊತ್ತಿನಲ್ಲಿ ರಾಷ್ಟ್ರಪತಿ ಭವನ ತಲುಪಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT