ದೇಶ

ಮೋದಿ 2.0 ಸರ್ಕಾರದ ಅಚ್ಚರಿ ಸೇರ್ಪಡೆ; ಮಾಜಿ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಸಂಪುಟಕ್ಕೆ!

Srinivasamurthy VN
ನವದೆಹಲಿ: ನೂತನ ಎನ್ ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 57 ಮಂದಿಯ ನೂತನ ಸಂಪುಟ ರಚನೆಯಾಗಿದೆ.
ನೂತನ ಮೋದಿ ಸರ್ಕಾರ 2.0ದ ರಚನೆ ಹಲವು ಅಚ್ಚರಿ ಅಂಶಗಳನ್ನು ಒಳಗೊಂಡಿದ್ದು, ಈ ಹಿಂದಿನ ಸರ್ಕಾರದಲ್ಲಿದ್ದ ಪ್ರಭಾವಿ ಸಚಿವರನ್ನೇ ಈ ಬಾರಿ ಸಂಪುಟದಿಂದ ಹೊರಗೆ ಇಟ್ಟು ಸಂಪುಟ ರಚನೆ ಮಾಡಲಾಗಿದೆ. ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ, ಮಾಜಿ ವಿದೇಶಾಂಗ ಸಚಿವೆ ಸ್ಮೃತಿ ಇರಾನಿ, ಸುರೇಶ್ ಪ್ರಭು, ಜೆ.ಪಿ. ನಡ್ಡಾ, ಮನೇಕಾ ಗಾಂಧಿ, ರಾಧಾ ಮೋಹನ್ ಸಿಂಗ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಜುವಲ್ ಓರಮ್ ಮತ್ತು ಜಯಂತ್ ಸಿನ್ಹಾ ಅವರ ಈ ಬಾರಿ ಲಭ್ಯವಿಲ್ಲ. ಕರ್ನಾಟಕದಿಂದ ಅನಂತಕುಮಾರ್ ಹೆಗಡೆ ಮತ್ತು ರಮೇಶ್ ಜಿಗಜಿಣಗಿ ಅವರಿಗೆ ಕೊಕ್ ನೀಡಲಾಗಿದೆ.
ನೂತನ ಮೋದಿ ಸರ್ಕಾರದ ಇನ್ನೊಂದು ಪ್ರಮುಖ ಅಚ್ಚರಿ ಸೇರ್ಪಡೆ ಎಂದರೆ ಎಸ್. ಜೈಶಂಕರ್ ಅವರದ್ದು. ಈ ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿದ್ದ ಸುಬ್ರಮಣ್ಯಂ ಜೈಶಂಕರ್ ಅವರಿಗೆ ಈ ಬಾರಿ ಸಂಪುಟ ದರ್ಜೆ ಸಚಿವ ಸ್ಥಾನ ನೀಡಲಾಗಿದೆ. ನರೇಂದ್ರ ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜೈ ಶಂಕರ್ ಅವರು ಈ ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ದಕ್ಷ ಅಧಿಕಾರಿಯಾಗಿದ್ದ ಜೈಶಂಕರ್ ಅವರಿಗೆ ಮೋದಿ 2.0 ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನ ನೀಡಿರುವುದು ಸುದ್ದಿಗೆ ಗ್ರಾಸವಾಗಿದೆ.
ಜೈ ಶಂಕರ್ ಅವರು ಈ ಹಿಂದೆ ಸಿಂಗಾಪುರದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಚೀನಾ ಮತ್ತು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. 2015 ಜನವರಿಯಿಂದ 2018ರ ಜನವರಿ ವರೆಗೂ ಜೈ ಶಂಕರ್ ಅವರು ವಿದೇಶಾಂಗ ಇಲಾಖೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 
ಕಳೆದ ಬಾರಿಯೂ ಕೂಡ ಮೋದಿ ಸರ್ಕಾರ ಇದೇ ರೀತಿಯ ಅಚ್ಚರಿ ನೀಡಿತ್ತು. ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಮೇಜರ್ ವಿಕೆ ಸಿಂಗ್ ಅವರನ್ನು ಮತ್ತು ಖ್ಯಾತ ಮಾಜಿ ಅಥ್ಲೀಟ್ ರಾಜ್ಯವರ್ಧನ್ ಸಿಂಗ್ ರಾಥೋಡ್ ರನ್ನು ಸಂಪುಟಕ್ಕೆ ಸೇರಿಸಿಕೊಂಡ ಅಚ್ಚರಿ ಮೂಡಿಸಿತ್ತು.
SCROLL FOR NEXT