ದೇಶ

ದೆಹಲಿ: ತಗ್ಗಿದ ವಾಯುಮಾಲಿನ್ಯ ಗುಣಮಟ್ಟ, ಜನತೆಯಲ್ಲಿ ಕಡಿಮೆಯಾಗದ ಆತಂಕ 

Sumana Upadhyaya

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಜನತೆ ಕೊಂಚ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶಗಳಾದ ಗುರುಗ್ರಾಮ್, ನೊಯ್ಡಾ, ಫರೀದಾಬಾದ್ ಮತ್ತು ಗಜಿಯಾಬಾದ್ ಗಳಲ್ಲಿ ವಾಯುಮಾಲಿನ್ಯ ಗುಣಮಟ್ಟದ ಸೂಚ್ಯಂಕ(ಎಕ್ಯುಐ) ಸ್ವಲ್ಪ ಸುಧಾರಿಸಿದೆ ಎಂದು ಕೇಂದ್ರ ವಾಯುಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ((SAFAR) ಕೇಂದ್ರ ತಿಳಿಸಿದೆ.


ಇಂದು ಬೆಳಗ್ಗೆ 9 ಗಂಟೆಗೆ ದೆಹಲಿಯ ಒಟ್ಟಾರೆ ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ 381 ಆಗಿದ್ದು ಅದು ಅತಿ ಕಳಪೆ ವಿಭಾಗದಲ್ಲಿ ಸೇರಿದೆ. ಸೂಚ್ಯಂಕ 51ರಿಂದ 100ರ ಮಧ್ಯೆ ಇದ್ದರೆ ಸಮಾಧಾನಕರ ಎಂದು ಪರಿಗಣಿಸಲಾಗುತ್ತದೆ. 101ರಿಂದ 200ರವರೆಗೆ ಇದ್ದರೆ ಸಾಧಾರಣ, 201ರಿಂದ 300ರವರೆಗೆ ಇದ್ದರೆ ಕಳಪೆ ಗುಣಮಟ್ಟ ಎಂದು ಪರಿಗಣಿಸಲಾಗುತ್ತದೆ. 300ರಿಂದ 400ರೊಳಗೆ ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ ಹೊಂದಿದ್ದರೆ ಅದು ತೀರಾ ಕಳಪೆ ಎಂದು ಮತ್ತು 401ರಿಂದ 500ರ ಮಧ್ಯೆ ಇದ್ದರೆ ಅಪಾಯಕಾರಿ ಎಂದು ಹೇಳಲಾಗುತ್ತದೆ.


ಧೀರ್ಪುರ್ ನಲ್ಲಿ ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ ಇಂದು ಬೆಳಗ್ಗೆ 271 ಆಗಿತ್ತು, ಮಥುರಾ ರಸ್ತೆಯಲ್ಲಿ ಕಳಪೆ ಗುಣಮಟ್ಟಕ್ಕೆ ಅಂದರೆ 236ಕ್ಕೆ ಇಳಿದಿದೆ. ಚಾಂದ್ನಿ ಚೌಕ್, ವಿಮಾನ ನಿಲ್ದಾಣ, ಟರ್ಮಿನಲ್ 3, ದೆಹಲಿ ವಿಶ್ವವಿದ್ಯಾಲಯದಲ್ಲಿ ಎಕ್ಯುಐ ಕ್ರಮವಾಗಿ ಇಂದು ಬೆಳಗ್ಗೆ 375, 234 ಮತ್ತು 256 ಆಗಿದ್ದವು.


ಮಧ್ಯ ವಯಸ್ಸಿನವರು ಮತ್ತು ಇಳಿ ವಯಸ್ಸಿನವರು ಉಸಿರಾಟ, ಸುಸ್ತು, ತುರಿಕೆ, ತಲೆನೋವಿನ ಸಮಸ್ಯೆ ಎಂದು ಹೇಳುತ್ತಿದ್ದು ದೆಹಲಿ ಸರ್ಕಾರ ಈ ಸಮಸ್ಯೆ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

SCROLL FOR NEXT