ದೇಶ

ಕತ್ತಲೆಯಲ್ಲಿ ಕಾಶ್ಮೀರ: ಹಿಮಪಾತದಿಂದ ನಾಲ್ವರು ಯೋಧರು ಸೇರಿ 10 ಮಂದಿ ಸಾವು

Lingaraj Badiger

ಶ್ರೀನಗರ: ಕಾಶ್ಮೀರ ಕಣಿವೆಯ ಕೆಲ ಭಾಗಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ನಾಲ್ವರು ಯೋಧರು ಸೇರಿದಂತೆ ಕನಿಷ್ಠ ಹತ್ತು ಜನ ಸಾವನ್ನಪ್ಪಿದ್ದಾರೆ.

ಹಿಮಪಾತದ ನಡುವೆ ಬುಧವಾರ ರಾತ್ರಿಯಿಂದ ವಿದ್ಯುತ್ ಸರಬರಾಜು ಸಹ ಸ್ಥಗಿತಗೊಂಡಿರುವುದರಿಂದ ಕಣಿವೆ ರಾಜ್ಯ ಕತ್ತಲೆಯಲ್ಲಿ ಮುಳುಗಿದೆ.

ಕಣಿವೆಯಲ್ಲಿ ಬುಧವಾರ ರಾತ್ರಿಯಿಂದ ಆಸ್ಪತ್ರೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ವಿದ್ಯುತ್ ಕಡಿತಗೊಂಡಿದೆ. ಈ ಸಂಸ್ಥೆಗಳಿಗೆ ವಿದ್ಯುತ್‍ಗಾಗಿ ಜನರೇಟರ್‌ಗಳನ್ನು ಬಳಸಲಾಗುತ್ತಿದೆ.

ಈ ಮಧ್ಯೆ, ಕಾಶ್ಮೀರ ಹೆದ್ದಾರಿ ಮತ್ತು ಮೊಘಲ್ ರಸ್ತೆಯನ್ನು ವಾಹನ ಸಂಚಾರಕ್ಕಾಗಿ ಮುಚ್ಚಲಾಗಿರುವುದರಿಂದ ಕಣಿವೆಯು ದೇಶದ ಇತರ ಭಾಗಗಳಿಂದ ಸಂಪೂರ್ಣವಾಗಿ ಸಂಪರ್ಕ ಕಳೆದುಕೊಂಡಿದೆ.

ಇನ್ನು ಭಾರಿ ಹಿಮಪಾತದಿಂದಾಗಿ ಸತತ ಎರಡನೇ ದಿನವೂ ವೈಮಾನಿಕ ಸಂಚಾರ ಸ್ಥಗಿತಗೊಂಡಿದೆ.

ವರದಿಯ ಪ್ರಕಾರ, ಕಾಶ್ಮೀರದ ಮೇಲ್ಭಾಗದ ಪ್ರದೇಶಗಳಲ್ಲಿ, ವಿಶೇಷವಾಗಿ ಉತ್ತರ ಕಾಶ್ಮೀರದಲ್ಲಿ ಅನೇಕ ಸ್ಥಳಗಳಲ್ಲಿ 6 ಅಡಿಗಳಷ್ಟು ಹಿಮಪಾತ ದಾಖಲಾಗಿದೆ. ಹಿಮಪಾತದಿಂದಾಗಿ 200 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 

SCROLL FOR NEXT