ದೇಶ

ವಿವಾದಿತ 2.77 ಎಕರೆ ಜಮೀನು ಯಾರಿಗೆ?: ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಆರಂಭ

Manjula VN

134 ವರ್ಷಗಳ ಪ್ರಶ್ನೆಗೆ ತಾರ್ಕಿಕ ಉತ್ತರ: ಐತಿಹಾಸಿಕ ತೀರ್ಪು ಹಿನ್ನೆಲೆ ದೇಶದಾದ್ಯಂದ ಭಾರೀ ಭದ್ರತೆ, ತೀವ್ರ ಕಟ್ಟೆಚ್ಚರ 

ನವದೆಹಲಿ: ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದು 1885ರಲ್ಲಿ ಮೊದಲ ಬಾರಿ ನ್ಯಾಯಾಲಯದ ಕಟಕಟೆ ಏರಿದ್ದ, ಬಳಿಕದ 134 ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಗುರಿಯಾಗಿದ್ದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಕುರಿತ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. 

ಇಂದು ಬೆಳಿಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ವಿವಾದ ಸಂಬಂಧ ತೀರ್ಪು ಪ್ರಕಟಿಸಲಿದೆ. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವಿವಾದದ ಕೇಂದ್ರ ಬಿಂದುವಾಗಿರುವ 2.77 ಎಕರೆ ಪ್ರದೇಶದ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್'ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ.ಎಸ್.ಎ.ಬೋಬ್ಡೆ, ಡಿ. ವೈ.ಚಂದ್ರಚೂಡ್, ನ್ಯಾ.ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಜೀರ್ ಅವನ್ನೊಳಗೊಂಡ ಸಾಂವಿಧಾನಿಕ ಪೀಠವು ಪ್ರಕಟಿಸಲಿದೆ. 

ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣ ಸಂಬಂಧ 40 ದಿನಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ್ದ ಪೀಠ ನೀಡಲಿರುವ ಈ ಐತಿಹಾಸಿಕ ತೀರ್ಪು, ರಾಮಮಂದಿರ ಕುರಿತ ಎಲ್ಲಾ ವಿವಾದಗಳಿಗೆ ತಾರ್ಕಿಕ ಅಂತ್ಯ ಹಾಡಲಿದೆ ಎಂದು ಹೇಳಲಾಗುತ್ತಿದೆ. 

ಅಯೋಧ್ಯೆ ಭೂ ವಿವಾದ ಸಂಬಂಧ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು. ಅದರಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ, ರಾಮ್ ಲಲ್ಲಾಗೆ ಸಮನಾಗಿ ಹಂಚಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ 14 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ಸಾಂವಿಧಾನಿಕ ಪೀಠ ಶನಿವಾರ ತನ್ನ ತೀರ್ಪು ಪ್ರಕಟಿಸಲಿದೆ. 

ಇದಕ್ಕೂ ಮುನ್ನ ಶುಕ್ರವಾರ ಸುಪ್ರೀಂಕೋರ್ಟ್'ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಶುಕ್ರವಾರ, ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾ ನಿರ್ದೇಶಕರ ಜೊತೆ ಸಮಾಲೋಚನೆ ನಡೆಸಿದ್ದರು. ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಮತ್ತು ಡಿಜಿಪಿ ಓಂ ಪ್ರಕಾಶ್ ಸಿಂಗ್ ಅವರನ್ನು ತಮ್ಮ ಕಚೇರಿಕೆ ಕರೆಸಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿಗಳು ಸುಮಾರು ಒಂದೂವರೆ ಗಂಟೆ ಕಾಲ ಇಬ್ಬರು ಅಧಿಕಾರಿಗಳಿಂದ ರಾಜ್ಯದಲ್ಲಿನ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಜ್ಯ ಸರ್ಕಾರ ಕೈಗೊಂಡಿರುವ ಭದ್ರತಾ ವ್ಯವಸ್ಥೆ, ತೀರ್ಪು ಪ್ರಕಟವಾದ ಬಳಿಕ ಎದುರಾಗಬಹುದಾದ ಯಾವುದೇ ಸಂದರ್ಭವನ್ನು ಎದುರಿಸಲು ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಕುರಿತು ನ್ಯಾ.ಗೊಗೋಯ್ ಅವರು ಉಭಯ ಅಧಿಕಾರಿಗಳಿಂದ ವಿಸ್ತೃತವಾಗಿ ಮಾಹಿತಿ ಪಡೆದುಕೊಂಡರು. 

SCROLL FOR NEXT