ಮಹಾ ಸರ್ಕಾರ ರಚನೆಗೆ ಬಿಜೆಪಿ ಏಕೆ ಹಕ್ಕು ಮಂಡಿಸುತ್ತಿಲ್ಲ?: ಶಿವಸೇನೆ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು 15 ದಿನ ಕಳೆದರೂ ನೂತನ ಸರ್ಕಾರ ರಚನೆಗೆ ಮುಂದಾಗದ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಿತ್ರ ಪಕ್ಷ ಶಿವಸೇನೆ....
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡು 15 ದಿನ ಕಳೆದರೂ ನೂತನ ಸರ್ಕಾರ ರಚನೆಗೆ ಮುಂದಾಗದ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಿತ್ರ ಪಕ್ಷ ಶಿವಸೇನೆ, ಏಕೈಕ ದೊಡ್ಡ ಪಕ್ಷ ಸರ್ಕಾರ ರಚನೆಗೆ ಏಕೆ ಹಕ್ಕು ಮಂಡಿಸುತ್ತಿಲ್ಲ? ಎಂದು ಪ್ರಶ್ನಿಸಿದೆ.
ರಾಜ್ಯಪಾಲರ ಸಹಕಾರದಿಂದ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಇಲ್ಲದಿದ್ದರೂ ಏಕೈಕ ದೊಡ್ಡ ಪಕ್ಷ ಎಂಬ ಕಾರಣಕ್ಕೆ ಸರ್ಕಾರಕ್ಕೆ ರಚಿಸಿದೆ ಮತ್ತು ಇದು ರಹಸ್ಯವಾಗಿ ಏನೂ ಉಳಿದಿಲ್ಲ. ಆದರೆ ಮಹಾರಾಷ್ಟ್ರದಲ್ಲಿ ಏಕೈಕ ದೊಡ್ಡ ಪಕ್ಷವಾಗಿದ್ದರೂ ಏಕೆ ಸರ್ಕಾರ ರಚನೆಯ ಹಕ್ಕು ಮಂಡಿಸಿಲ್ಲ ಎಂದು ಶೀವಸೇನಾ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ. ಅಲ್ಲದೆ ಆದಷ್ಟು ಬೇಗ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸುವಂತೆ ಬಿಜೆಪಿಗೆ ಮನವಿ ಮಾಡಿದೆ.
ಮಹಾರಾಷ್ಟ್ರ ವಿಧಾನಸಭೆಯ ಅವಧಿ ಇಂದಿಗೆ ಅಂತ್ಯಗೊಂಡಿದೆ. ಹೀಗಾಗಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ್ದು, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ.
ಬಿಜೆಪಿ ಮತ್ತು ಶಿವಸೇನೆ ಮೈತ್ರಿಯೂ ಸರ್ಕಾರ ರಚನೆಗೆ ಬೇಕಾಗಿರುವ ಬಹುಮತವನ್ನು ಪಡೆದಿದ್ದರೂ ಶಿವಸೇನೆ ಮುಖ್ಯಮಂತ್ರಿ ಸ್ಥಾನ ಹಂಚಿಕೆಯ ಬೇಡಿಕೆ ಇಟ್ಟಿದೆ. ಆದರೆ, ಸಿಎಂ ಸ್ಥಾನವನ್ನು ಸುತಾರಾಂ ಬಿಟ್ಟುಕೊಡುವುದಿಲ್ಲ ಎಂದು ಬಿಜೆಪಿ ಪಟ್ಟುಹಿಡಿದಿರುವುದರಿಂದ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರೆದಿದೆ. ಇನ್ನು ಕಾಂಗ್ರೆಸ್-ಎನ್ಸಿಪಿ ಮೈತ್ರಿ ಕೂಡ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.