ದೇಶ

ದೆಹಲಿಯಲ್ಲಿ ಸಮ-ಬೆಸ ನಿಯಮ ಜಾರಿಗೊಳಿಸಿದರೂ ಹೆಚ್ಚಿದ ಮಾಲಿನ್ಯ, 4 ರಾಜ್ಯಗಳ ಮುಖ್ಯ ಕಾರ್ಯದರ್ಶಿಗೆ ಸುಪ್ರೀಂ ಸಮನ್ಸ್

Lingaraj Badiger

ನವದೆಹಲಿ: ದೆಹಲಿ ಸರ್ಕಾರ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿಗೊಳಿಸಿದರೂ ರಾಷ್ಟ್ರ ರಾಜಧಾನಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್ ನಾಲ್ಕು ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸುವಂತೆ ನ್ಯಾಯಮೂರ್ತಿ ಅರುಣ್ ಮಿಶ್ರಾ ಹಾಗೂ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ ದೆಹಲಿ, ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ನೀಡಿದೆ.

ವಾಯು ಮಾಲಿನ್ಯ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ದೆಹಲಿಯ 13 ಮಾಲಿನ್ಯ ತಾಣಗಳನ್ನು ಮಾಲಿನ್ಯಕಾರಕಗಳಿಂದ ತೆರವುಗೊಳಿಸಬೇಕು ಎಂದು ಸುಪ್ರೀಂ ಪೀಠ ದೆಹಲಿ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಸಮ-ಬೆಸ ನಿಯಮದಿಂದ ದ್ವಿಚಕ್ರ ಮತ್ತು ಆಟೋಗಳಿಗೆ ವಿನಾಯ್ತಿ ನೀಡಿರುವುದನ್ನು ಸಹ ಪ್ರಶ್ನಿಸಿದೆ.

ದೆಹಲಿಯಲ್ಲಿ ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಜಾರಿಗೊಳಿಸಿದರೂ ಮತ್ತು ಕೃಷಿ ತ್ಯಾಜ್ಯ ಸುಡುವುದನ್ನು ಕಡಿಮೆ ಮಾಡಿದರೂ ಮಾಲಿನ್ಯ ಪ್ರಯಾಣ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಸಮ-ಬೆಸ ವಾಹನ ಸಂಚಾರ ನಿಯಮ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತಿದೆ. ಆದರೆ ಮಾಲಿನ್ಯ ಹೆಚ್ಚುತ್ತಿರುವುದಕ್ಕೆ ಕೃಷಿ ತ್ಯಾಜ್ಯ ಸುಡುತ್ತಿರುವುದೇ ಕಾರಣ ಎಂದು ದೆಹಲಿ ಸರ್ಕಾರ ಸುಪ್ರೀಂ ಕೋರ್ಟ್ ತಿಳಿಸಿದೆ.
 

SCROLL FOR NEXT