ದೇಶ

ಅವನತಿಯತ್ತ ಪತ್ರಿಕೋದ್ಯಮ, ಪತ್ರಕರ್ತರಿಗೂ ನೀತಿ ಸಂಹಿತೆ ಜಾರಿಗೆ ತರಬೇಕು: ವೆಂಕಯ್ಯ ನಾಯ್ಡು

Lingaraj Badiger

ನವದೆಹಲಿ: ರಾಜಕೀಯ ಪಕ್ಷಗಳು, ವಾಣಿಜ್ಯೋದ್ಯಮಿಗಳು ತಮ್ಮದೇ ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳನ್ನು ಪ್ರಾರಂಭಿಸಿದ ನಂತರ ಪತ್ರಿಕೋದ್ಯಮದ ಮೌಲ್ಯ ಅವನತ್ತಿಯತ್ತ ಸಾಗಿದೆ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶನಿವಾರ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಿಕೋದ್ಯಮ 2019ರ ರಾಷ್ಟ್ರೀಯ ಪ್ರಶಸ್ತಿಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಜೊತೆಗೂಡಿ ವಿತರಿಸಿದ ನಂತರ ಅವರು ಈ ವಿಷಯ ತಿಳಿಸಿದರು.

ಉದ್ದಿಮೆದಾರರು, ರಾಜಕೀಯ ಪಕ್ಷಗಳು ನಾಯಕರು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳನ್ನು ಸ್ಥಾಪಿಸುವುದರೊಂದಿಗೆ, ಪತ್ರಿಕೋದ್ಯಮದ ಪ್ರಮುಖ ಮೌಲ್ಯ, ಉದ್ದೇಶವೇ ಹಾಳಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಇತ್ತೀಚಿನ ನಕಲಿ ಸುದ್ದಿಗಳ ಅಪಾಯಗಳನ್ನು ಎತ್ತಿ ತೋರಿಸಿದ ಉಪ ರಾಷ್ಟ್ರಪತಿಗಳು, ಮಾಧ್ಯಮ ಸಂಸ್ಥೆಗಳಿಗೆ ಮತ್ತು ಪತ್ರಕರ್ತರಿಗೂ ನೀತಿ ಸಂಹಿತೆ ಜಾರಿ ತರುವ ಸಮಯ ಬಂದಿದೆ ಎಂದರು.

ದಿನ ಪತ್ರಿಕೆ ಅಥವಾ ಸುದ್ದಿ ವಾಹಿನಿಯೊಂದು ರಾಜಕೀಯ ಪಕ್ಷದಿಂದ ನಡೆಯುತ್ತಿದ್ದರೆ ಅದನ್ನು ಸ್ಪಷ್ಟವಾಗಿ ಜನತೆಗೆ ತಿಳಿಸಬೇಕು ಎಂದು ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
 

SCROLL FOR NEXT