ದೇಶ

ಅಲಹಾಬಾದ್ ನಂತರ ಆಗ್ರಾ ಹೆಸರು ಬದಲಾವಣೆಗೆ ಮುಂದಾಗಿ ಯೋಗಿ ಸರ್ಕಾರ

Lingaraj Badiger

ಲಖನೌ: ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಲಹಾಬಾದ್ ನಂತರ ಈಗ ಪ್ರೇಮ ಸೌದ ತಾಜ್ ಮಹಲ್ ಇರುವ ಆಗ್ರಾದ ಹೆಸರು ಬದಲಾವಣೆಗೆ ಮುಂದಾಗಿದೆ.

ಆಗ್ರಾ ಜಿಲ್ಲೆಯ ಹೆಸರನ್ನು ಆಗ್ರಾವನ ಎಂದು ಬದಲಿಸಲು ಯೋಗಿ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಉತ್ತರ ಪ್ರದೇಶಸರ್ಕಾರ ಅಂಬೇಡ್ಕರ್ ವಿಶ್ವವಿದ್ಯಾಲಯದ ಪರಿಣತರ ಸಲಹೆ ಕೇಳಿದೆ. 

ಆಗ್ರಾ ಹೆಸರು ಬದಲಾವಣೆ ಮಾಡುವಂತೆ ಆಗ್ರಾ ವಿಧಾನಸಭಾ ಕ್ಷೇತ್ರದ ಶಾಸಕ ಜಗನ್​ ಪ್ರತಾಪ್​ ಗಾರ್ಗ್​ ಅವರು ಆದಿತ್ಯ ನಾಥ್ ಅವರಿ​ಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಗ್ರಾದಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಆಗ್ರಾದ ಐತಿಹಾಸಿಕ ಹೆಸರಿನ ಕುರಿತು ಅಧ್ಯಯನ ನಡೆಸಿ ಸಲಹೆ ನೀಡಲು ಸೂಚನೆ ನೀಡಲಾಗಿದೆ.

ಆಗ್ರಾಕ್ಕೆ ಈ ಮೊದಲು ಆಗ್ರಾವನ ಎಂಬ ಹೆಸರಿತ್ತು ಎಂದು ನಂಬಲಾಗಿದೆ. ಹೀಗಾಗಿ ಜಿಲ್ಲೆಯ ಹಳೆಯ ಹೆಸರನ್ನೇ ಮರುನಾಮಕರಣ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಆಗ್ರಾವನದ ಹೆಸರು ಆಗ್ರಾ ಎಂದು ಯಾವಾಗ ಮತ್ತು ಏಕೆ ಬದಲಾಯಿತು ಎಂಬ ಸಂದರ್ಭ ಹಾಗೂ ಸಮಯದ ಕುರಿತು ತಿಳಿದುಕೊಳ್ಳಲು ಇತಿಹಾಸಕಾರರಿಗೆ ನಿರ್ದೇಶಿಸಲಾಗಿದೆ.

ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್‌ ಅನ್ನು ಪ್ರಯಾಗ್‌ರಾಜ್ ಎಂದು ಹಾಗೂ ಐತಿಹಾಸಿಕ ಮುಘಲ್ ಸರಾಯ್ ರೈಲು ನಿಲ್ದಾಣಕ್ಕೆ ದೀನದಯಾಳ್ ಉಪಾಧ್ಯಾಯ ರೈಲು ನಿಲ್ದಾಣ ಎಂದು ಮರು ನಾಮಕರಣ ಮಾಡಿತ್ತು.

SCROLL FOR NEXT