ದೇಶ

ಜಾರ್ಖಂಡ್‌ನಲ್ಲಿ 10,000 ಆದಿವಾಸಿಗಳ ವಿರುದ್ಧ ದೇಶದ್ರೋಹ ಪ್ರಕರಣ: ಮಾರಾಟವಾದ' ಮಾಧ್ಯಮ- ರಾಹುಲ್ ಕಿಡಿ

Nagaraja AB

ನವದೆಹಲಿ, ಜಾರ್ಖಂಡ್ ನಲ್ಲಿ 10,000 ಆದಿವಾಸಿಗಳ ವಿರುದ್ಧ 'ಕಠಿಣ' ದೇಶದ್ರೋಹದ ಕಾನೂನನಡಿ ಪ್ರಕರಣ ದಾಖಲಿಸಿರುವುದು ವರದಿಯಾದ ನಂತರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಈ ವಿಷಯದಲ್ಲಿ ಮಾಧ್ಯಮಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದು, ಮಾಧ್ಯಮದಲ್ಲಿ ಈ ವಿಷಯ ಬಿರುಗಾಳಿ ಸೃಷ್ಟಿಯಾಗಬೇಕಿತ್ತು, ಆದರೆ ಅದು ಆಗಿಲ್ಲ ಎಂದು ಟೀಕಿಸಿದ್ದಾರೆ.

ಇಂತಹ ಆತಂಕಕಾರಿ ವಿಷಯದ ಬಗ್ಗೆ ಮಾಧ್ಯಮಗಳು ಸೊಲ್ಲೆತ್ತದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಈ ವಿಷಯದಲ್ಲಿ ನಾಗರಿಕ ಸಮಾಜವಾದರೂ ಧ್ವನಿ ಎತ್ತಬೇಕು ಎಂಬ ಒತ್ತಾಯಿಸಿದ್ದಾರೆ.

ರಾಜ್ಯದ ದಬ್ಬಾಳಿಕೆಯ ವಿರುದ್ಧ ಹೋರಾಡಿದ 10,000 ಆದಿವಾಸಿಗಳ ವಿರುದ್ಧ ಕಠಿಣವಾದ 'ದೇಶದ್ರೋಹ' ಕಾನೂನು ದಾಖಲಿಸಿದಾಗ ನಮ್ಮ ರಾಷ್ಟ್ರದ ಆತ್ಮಸಾಕ್ಷಿಗೆ ಆಘಾತವನ್ನುಂಟುಮಾಡಬೇಕಾಗಿತ್ತು. ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಬಿರುಗಾಳಿ ಏಳಬೇಕಾಗಿತ್ತು. ಆದರೆ ಅದು ಆಗಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಈ ವಿಷಯದ ಬಗ್ಗೆ ಮೌನವಾಗಿರುವುದಕ್ಕಾಗಿ ಮಾಧ್ಯಮಗಳ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ನಮ್ಮ 'ಮಾರಾಟವಾದ' ಮಾಧ್ಯಮವು ತನ್ನ ಧ್ವನಿಯನ್ನು ಕಳೆದುಕೊಂಡಿರಬಹುದು; ನಾಗರಿಕರಾಗಿ ನಾವು ಈ ಜವಾಬ್ದಾರಿಯನ್ನು ನಿಭಾಯಿಸಬಹುದೇ? ಎಂದು ಪ್ರಶ್ನಿಸಿದ್ದಾರೆ

2017 ರಲ್ಲಿ ಸ್ವಾಯತ್ತ ಪ್ರದೇಶಕ್ಕೆ ಒತ್ತಾಯಿಸಿ ಪ್ರಾರಂಭವಾದ ಪಾಟಲ್ಗಾಡಿ ಎಂಬ ಪ್ರತಿಭಟನಾ ಆಂದೋಲನದದಲ್ಲಿ ಭಾಗಿಯಾದ ಖುಂಟಿ ಜಿಲ್ಲೆಯ 10,000 ಆದಿವಾಸಿಗಳ ವಿರುದ್ಧ ಜಾರ್ಖಂಡ್ ಸರ್ಕಾರವು ದೇಶದ್ರೋಹ ಕಾನೂನಿನಡಿ ಪ್ರಕರಣ ದಾಖಲಿಸಿದೆ ಎಂದು ವರದಿಯಾದ ನಂತರ ರಾಹುಲ್ ಗಾಂಧಿಯವರಿಂದ ಈ ಹೇಳಿಕೆ ಹೊರಬಿದ್ದಿದೆ.

ಸಂವಿಧಾನದ ಐದನೇ ಅನುಚ್ಚೇದದಡಿ ಆದಿವಾಸಿ ಪ್ರದೇಶಗಳಿಗೆ ವಿಶೇಷ ಸ್ವಾಯತ್ತತೆಗೆ ಆಗ್ರಹಿಸಿ, ಬುಡಕಟ್ಟು ಜನಾಂಗದವರು ಭಾರತೀಯ ಸಂವಿಧಾನದ ನಿಬಂಧನೆಗಳೊಂದಿಗೆ ಕೆತ್ತಿದ ಕಲ್ಲಿನ ಶಿಲೆಗಳನ್ನು ಸ್ಥಾಪಿಸಿದ್ದರು. ವರದಿಯ ಪ್ರಕಾರ, ಜಾರ್ಖಂಡ್ ಪೊಲೀಸರು ಆಂದೋಲನವನ್ನು ಭೇದಿಸಲು ಸಾವಿರಾರು ಆದಿವಾಸಿಗಳ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸಿದ್ದರು

SCROLL FOR NEXT