ದೇಶ

ಟೀಕೆ, ವಿರೋಧದ ಬಳಿಕ ರಾಜ್ಯಸಭೆ ಮಾರ್ಷಲ್'ರ ಮಿಲಿಟರಿ ಶೈಲಿ ಟೋಪಿಗೆ ಕೊಕ್

Manjula VN

ನವದೆಹಲಿ: ರಾಜ್ಯಸಭೆ ಮಾರ್ಷಲ್'ಗಳು ಸೇನಾ ಶೈಲಿಯ ಟೋಪಿ ಧರಿಸಿದ್ದಕ್ಕೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಗುರುವಾರ ಮಾರ್ಷಲ್'ಗಳು ಟೋಪಿ ಧರಿಸದೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 

ಮಾರ್ಷಲ್'ಗಳಿಗೆ ಸಾಂಪ್ರದಾಯಿಕ ಭಾರತೀಯ ಉಡುಗೆ ಮತ್ತು ಪೇಟಾದ ಬದಲು ಕಪ್ಪು ನೇರಳೆ ಬಣ್ಣದ ಕೋಟು ಮತ್ತು ಮಿಲಿಟರಿ ಶೈಲಿ ಹಸಿರು ಟೋಪಿಯನ್ನು ನೀಡಲಾಗಿತ್ತು. 

ವಿರೋಧ ಪಕ್ಷದ ಕೆಲವು ಸದಸ್ಯರು ಹಾಗೂ ಮಾಜಿ ಯೋಧರು ಮಾರ್ಷಲ್'ಗಳ ಹೊಸ ಸಮವಸ್ತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಹೊಸ ವಸ್ತ್ರ ಸಂಹಿತೆಯನ್ನು ಪರಿಶೀಲನೆ ನಡೆಸಲು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಆದೇಶಿಸಿದ್ದರು. 

ವಿವಿಧ ಸಲಹೆಗಳನ್ನು ಪರಿಗಣಿಸಿದ ನಂತರ ರಾಜ್ಯಸಭಾ ಸಚಿವಾಲಯ ಮಾರ್ಷಲ್‌ಗಳಿಗೆ ಹೊಸ ವಸ್ತ್ರಸಂಹಿತೆಯನ್ನು ರೂಪಿಸಿದೆ. ಆದರೆ ಕೆಲ ರಾಜಕೀಯ ಪಕ್ಷಗಳು ಹಾಗೂ ಗಣ್ಯ ವ್ಯಕ್ತಿಗಳಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ ಈ ಬಗ್ಗೆ ಪರಿಶೀಲಿಸಲು ಸಚಿವಾಲಯದ ಕಾರ್ಯದರ್ಶಿಯವರಿಗೆ ಸೂಚಿಸಲು ನಿರ್ಧರಿಸಿದ್ದೇನೆ ಎಂದು ನಾಯ್ಡು ಹೇಳಿದ್ದರು.

250ನೇ ಐತಿಹಾಸಿಕ ಕಲಾಪ ನಡೆಸಿದ ರಾಜ್ಯಸಭೆಯಲ್ಲಿ ಮಾರ್ಷಲ್'ಗಳು ಧರಿಸಿದ್ದ ನೂತನ ಸಮವಸ್ತ್ರ ಎಲ್ಲರ ಗಮನವನ್ನು ಸೆಳೆದಿತ್ತು. ಈ ಹಿಂದೆ ಭಾರತೀಯ ಶೈಲಿಯ ಪೇಟ ಇರುವ ಪೋಷಾಕಿಗೆ ಬದಲಾಗಿ ಮಿಲಿಟರಿ ಶೈಲಿಯ ಹೊಸ ಸಮವಸ್ತ್ರ ಧರಿಸಿ ಮಾರ್ಷಲ್'ಗಳು ಕಾರ್ಯನಿರ್ವಹಿಸಿದ್ದಾರೆ. ನೂತನ ಸಮವಸ್ತ್ರ ಸೇನಾ ಸಮವಸ್ತ್ರವನ್ನು ಹೋಲುತ್ತಿದ್ದು, ಅದೇ ಶೈಲಿಯ ಸೂಟ್ ಹಾಗೂ ಪ್ಯಾಂಟ್ ಇದೆ. 

SCROLL FOR NEXT