ದೇಶ

ಶಿವಸೇನೆ ಜನತೆ ತೀರ್ಪಿಗೆ ದ್ರೋಹ ಮಾಡಿತು, ಹೀಗಾಗಿ ನಾವು ಬೇರೆ ದಾರಿಯಿಲ್ಲದೆ ಸರ್ಕಾರ ರಚಿಸಿದೆವು: ಚಂದ್ರಕಾಂತ್ ಪಾಟೀಲ್ 

Sumana Upadhyaya

ಮುಂಬೈ: ಶಿವಸೇನೆ ದ್ರೋಹ ಬಗೆದಿದ್ದರಿಂದ ಬಿಜೆಪಿ ಬಲವಂತವಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಬೇಕಾಗಿ ಬಂತು ಎಂದು ಮಹಾರಾಷ್ಟ್ರದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.


ಕಳೆದ ತಿಂಗಳು ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟಗೊಂಡ ಮೇಲೆ ಮಹಾರಾಷ್ಟ್ರ ಜನತೆ ಕೊಟ್ಟ ತೀರ್ಪಿನ ಪ್ರಕಾರ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚಿಸಬೇಕಾಗಿತ್ತು. ಸರ್ಕಾರ ರಚಿಸಲು 144 ಸದಸ್ಯ ಬಲ ಬೇಕಾಗಿತ್ತು. ಬಿಜೆಪಿ-ಶಿವಸೇನೆಗೆ ಒಟ್ಟಾಗಿ 161 ಸದಸ್ಯ ಸ್ಥಾನದ ಬೆಂಬಲವಿತ್ತು. ಆಗ ನಮಗೂ ಸಿಎಂ ಹುದ್ದೆ ಎರಡೂವರೆ ವರ್ಷಗಳ ಕಾಲ ಬೇಕು ಎಂದು ಶಿವಸೇನೆ ಕ್ಯಾತೆ ತೆಗೆದು ಸಿಎಂ ಹುದ್ದೆ ಕೊಡದಿದ್ದರೆ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದಿತು. ಶಿವಸೇನೆ ನಂತರ ನಮ್ಮ ಜೊತೆ ಮಾತುಕತೆಗೆ ಬರಲೇ ಇಲ್ಲ, ಅವರು ಜನತೆ ಕೊಟ್ಟ ತೀರ್ಪಿಗೆ ದ್ರೋಹ ಮಾಡಿದ್ದಾರೆ. ಮೊದಲ ಸುದ್ದಿಗೋಷ್ಠಿಯಿಂದಲೇ ಅವರು ಪರ್ಯಾಯ ಸರ್ಕಾರ ರಚನೆ ಬಗ್ಗೆ ಮಾತನಾಡುತ್ತಿದ್ದರು ಎಂದು ಚಂದ್ರಕಾಂತ್ ಪಾಟೀಸ್ ಸುದ್ದಿಗಾರರಿಗೆ ತಿಳಿಸಿದರು.


ನಮ್ಮ ಪರವಾಗಿ ಜನತೆ ತೀರ್ಪು ಕೊಟ್ಟಿದ್ದರಿಂದ ಬಿಜೆಪಿ ಸರ್ಕಾರ ರಚಿಸಬೇಕೆಂಬುದು ಜನತೆಯ ಆಗ್ರಹವಾಗಿತ್ತು. ಶಿವಸೇನೆ ಹಿಂದುತ್ವ ಬಿಟ್ಟುಬಿಡಲು ತಯಾರಿತ್ತು. ವಿ ಡಿ ಸಾವರ್ಕರ್ ಗೆ ಭಾರತ ರತ್ನ ನೀಡುವ ವಿಷಯವನ್ನು ಬಿಟ್ಟುಬಿಡಲು ಕೂಡ ತಯಾರಿದ್ದರು. ಹೀಗಿರುವಾಗ ನಾವ್ಯಾಕೆ ಸುಮ್ಮನಿರಬೇಕು? ಹೀಗಾಗಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಾವು ಸ್ಥಿರ ಸರ್ಕಾರ ಕೊಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸಂಜಯ್ ರಾವತ್ ಶಿವಸೇನೆಯನ್ನು ಹಾಳುಮಾಡಿದ್ದಾರೆ. ಇನ್ನಾದರೂ ಅವರು ಸುಮ್ಮನೆ ಕುಳಿತುಕೊಳ್ಳಬೇಕು. ದ್ರೋಹದ ಬಗ್ಗೆ ಅವರು ಮಾತನಾಡಬಾರದು, ನಿರಂತರವಾಗಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಾ ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆ ಮಾತುಕತೆಯಾಡುತ್ತಿದ್ದರು, ಹೀಗಾಗಿ ನಾವಿಂದು ಬಲವಂತವಾಗಿ ಸರ್ಕಾರ ರಚಿಸಿದ್ದೇವೆ ಎಂದರು.

SCROLL FOR NEXT