ದೇಶ

ಜನ ಗ್ಯಾಸ್​ ಚೇಂಬರ್​ ನಲ್ಲಿ ಬದುಕುವಂತಾಗಿದೆ, ಅದರ ಬದಲು ಬಾಂಬ್ ಹಾಕಿ ಸಾಯಿಸಿ: ದೆಹಲಿ ಮಾಲಿನ್ಯಕ್ಕೆ ಸುಪ್ರೀಂ ಆಕ್ರೋಶ

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿಯ ಮಿತಿಮೀರಿದ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ದೆಹಲಿ, ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಜನ ಗ್ಯಾಸ್ ಚೇಂಬರ್ ನಲ್ಲಿ ವಾಸಿಸುವಂತಹ ಸ್ಥಿತಿ ಬಂದಿದೆ. ಅದರ ಬದಲು ಎಲ್ಲರನ್ನೂ ಬಾಂಬ್ ಹಾಕಿ ಸಾಯಿಸುವುದೇ ಉತ್ತಮ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ, ಜನ ನಿತ್ಯ ಉಸಿರಾಡುವುದಕ್ಕೂ ಭಯ ಪಡುವಂತಹ ಪರಿಸ್ಥಿತಿ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗಿದೆ. ದೆಹಲಿ ಸರ್ಕಾರ ಎಲ್ಲರ ಮುಖಕ್ಕೂ ಮಾಸ್ಕ್ ಹಾಕಿ ಸುಮ್ಮನಾಗಿ ಬಿಟ್ಟಿದೆ ಎಂದರು.

ಗ್ಯಾಸ್ ಚೇಂಬರ್‌ನಲ್ಲಿ ವಾಸಿಸುವಂತೆ ಜನರನ್ನು ಏಕೆ ಬಲವಂತ ಮಾಡಲಾಗುತ್ತಿದೆ? ಅದರ ಬದಲು ಒಂದೇ ದಿನ ಅವರನ್ನು ಕೊಲ್ಲುವುದು ಸೂಕ್ತ. ಅದಕ್ಕಾಗಿ 15 ಬ್ಯಾಗುಗಳಲ್ಲಿ ಸ್ಫೋಟಕ ತಂದು ಸ್ಫೋಟಿಸಿ ಎಲ್ಲರನ್ನೂ ಕೊಂದುಬಿಡಿ. ಈ ಎಲ್ಲದರಿಂದ ಜನರು ಏಕೆ ನರಳಬೇಕು? ಎಂದು ಸರ್ವೋಚ್ಚ ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿದೆ. 

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ದೆಹಲಿ ಮಾಲಿನ್ಯಕ್ಕೆ ಕಡಿವಾಣ ಹಾಕುವಲ್ಲಿ ಅಟ್ಟರ್ ಪ್ಲಾಫ್ ಆಗಿವೆ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಅಲ್ಲದೆ ಈ ಸಂಬಂಧ ದೆಹಲಿ, ಹರಿಯಾಣ, ಪಂಜಾಬ್ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಮನ್ಸ್ ಜಾರಿ ಮಾಡಿದೆ.

SCROLL FOR NEXT