ದೇಶ

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತದಿಂದ ಶ್ರೀಲಂಕಾಕ್ಕೆ 50 ಮಿಲಿಯನ್ ಡಾಲರ್ ನೆರವು

Lingaraj Badiger

ನವದೆಹಲಿ: ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 50 ಮಿಲಿಯನ್ ಅಮೆರಿಕನ್ ಡಾಲರ್ ಸೇರಿದಂತೆ ಒಟ್ಟು 450 ಅಮೆರಿಕನ್ ಡಾಲರ್ ನೆರವನ್ನು ಶ್ರೀಲಂಕಾಕ್ಕೆ ಘೋಷಿಸಿದ್ದಾರೆ.

ಪರಸ್ಪರ ಭದ್ರತೆಗಾಗಿ ಮತ್ತು ಭಯೋತ್ಪಾದಕ ಭೀತಿಯ ವಿರುದ್ಧ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲು ನಾನು ಅಧ್ಯಕ್ಷ ರಾಜಪಕ್ಸೆ ಅವರೊಂದಿಗೆ ವಿವರವಾದ ಮಾತುಕತೆ ನಡೆಸಿದ್ದೇನೆ. ಶ್ರೀಲಂಕಾದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಭಾರತದ ವಿವಿಧ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

ಶಾಂತಿಯುತ ಮತ್ತು ಸಮೃದ್ಧವಾದ ಶ್ರೀಲಂಕಾವನ್ನು ಭಾರತ ಬಯಸುತ್ತದೆ. ಏಕೆಂದರೆ ಇದು ಇಡೀ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿಯನ್ನು ಖಾತರಿಪಡಿಸುತ್ತದೆ ಎಂದು ಮೋದಿ ತಿಳಿಸಿದರು.

ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಗೊಟಬಯ ರಾಜಪಕ್ಸೆ, "ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಂದು ಬೆಳಿಗ್ಗೆ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಚರ್ಚೆಯು ಅತ್ಯಂತ ಸೌಹಾರ್ದಯುತ ಮತ್ತು ಧೈರ್ಯ ತುಂಬುವಂತಿತ್ತು. ಇವುಗಳಲ್ಲಿ ಉಭಯ ದೇಶಗಳ ಸುರಕ್ಷತೆಗೆ ಸಂಬಂಧಿಸಿದಂತೆ ಸಹಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ನಿರ್ಧರಿಸಿರುವುದಾಗಿ" ತಿಳಿಸಿದರು.

"ನಾವು ಮೀನುಗಾರರ ಸಮಸ್ಯೆಯನ್ನು ದೀರ್ಘವಾಗಿ ಚರ್ಚಿಸಿದ್ದೇವೆ. ನಮ್ಮ ವಶದಲ್ಲಿರುವ ಭಾರತಕ್ಕೆ ಸೇರಿದ ದೋಣಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಭರವಸೆ ನೀಡಿದರು.

SCROLL FOR NEXT