ದೇಶ

ಮಹಾರಾಷ್ಟ್ರ: ವಿಶ್ವಾಸ ಮತ ಗೆದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಿಜೆಪಿ ಸಭಾತ್ಯಾಗ

Nagaraja AB

ಮಹಾರಾಷ್ಟ್ರ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಶ್ವಾಸ ಮತವನ್ನು  ಗೆದಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ  ನೂತನ ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಸರ್ಕಾರ ಬಹುಮತವನ್ನು ಸಾಬೀತುಪಡಿಸಿದೆ. 

ಸದನದಲ್ಲಿ ಹಾಜರಿದ್ದ ಶಾಸಕರ ಪೈಕಿ ಸಮ್ಮಿಶ್ರ ಸರ್ಕಾರದ ಪರ 169 ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ. 119 ಶಾಸಕರು ತಟಸ್ಥರಾಗಿ ಉಳಿದರು. ಎಂಎನ್ ಎಸ್ ಪಕ್ಷದ  ಒಬ್ಬ ಶಾಸಕ ಕೂಡಾ ತಟಸ್ಥರಾಗಿ ಉಳಿದರು.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆಲ್ಲಲು ಮ್ಯಾಜಿಕ್ ನಂಬರ್ 145 ಆಗಿತ್ತು. ಇದಕ್ಕೂ ಮುನ್ನ ಸದನದ ನಿಯಮವಳಿಗಳನ್ನು ಉಲ್ಲಂಘಿಸಿ ವಿಶ್ವಾಸಮತ ಯಾಚನೆ ನಡೆಸಲಾಗುತ್ತಿದೆ ಎಂದು ಆರೋಪಿಸಿ  ಬಿಜೆಪಿಯ 105 ಶಾಸಕರು ಸಭಾತ್ಯಾಗ ಮಾಡಿದರು.

ಹಂಗಾಮಿ ಸ್ಪೀಕರ್ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್ ನೇತೃತ್ವದಲ್ಲಿ ಸಭಾತ್ಯಾಗ ನಡೆಸಿದರು.

ಅಂತಿಮವಾಗಿ ಹಂಗಾಮಿ ಸ್ಪೀಕರ್ ಸ್ಥಾನದಲ್ಲಿದ್ದ ದಿಲೀಪ್ ಪಾಟೀಲ್  ಸದಸ್ಯರ ತಲೆ ಎಣಿಕೆ ನಡೆಸಿ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು. ಹೀಗಾಗಿ ಉದ್ಧವ್ ಠಾಕ್ರೆ ಸರ್ಕಾರ 6 ತಿಂಗಳು ಸೇಫ್ ಆಗಿದೆ. ವಿಧಾನಸಭೆ ಸದಸ್ಯರಲ್ಲದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, 6 ತಿಂಗಳೊಳಗೆ ಯಾವುದಾದರೊಂದು ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಬೇಕಾಗಿದೆ. 

SCROLL FOR NEXT