ನವದೆಹಲಿ: ಅಮೆರಿಕಾದ ಹ್ಯೂಸ್ಟನ್'ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದ ಭಾಷಣದ ವೇಳೆ 'ಅಬ್ ಬಾರ್ ಟ್ರಂಪ್ ಸರ್ಕಾರ' ಹೇಳಿಕೆ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್, ಮೋದಿಯವರ ಈ ರೀತಿಯ ಹೇಳಿಕೆ ಅವರ ಅಸಮರ್ಥತೆಯನ್ನು ತೋರಿಸುತ್ತದೆ. ಭಾರತದ ಪ್ರಜಾಪ್ರಭುತ್ವಕ್ಕೆ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಮೋದಿಯವರ ಹೇಳಿಕೆ ಕುರಿತಂತೆ ಟ್ವೀಟ್ ಮಾಡಿದ್ದ ವಿದೇಶಾಂಗ ಸಚಿವಾಲಯದ ಸಚಿವ ಜೈಶಂಕರ್ ಅವರು, ಹೌಡಿ ಮೋದಿಯಲ್ಲಿ ಪ್ರಧಾನಮಂತ್ರಿಗಳು ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದ್ದರು.
ಈ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಅವರು, ಪ್ರಧಾನಿ ಮೋದಿವಯರ ಅಸಮರ್ಥತೆಯನ್ನು ಮರೆಮಾಚಿದ್ದಕ್ಕೆ ಧನ್ಯವಾದಗಳು ಜೈಶಂಕರ್. ಮೋದಿಯವರ ಈ ರೀತಿಯ ಹೇಳಿಗೆ ದೇಶದ ಪ್ರಜಾಪ್ರಭುತ್ವಕ್ಕೆ ಗಂಭೀರ ಸಮಸ್ಯೆಗಳನ್ನು ಎದುರು ಮಾಡುತ್ತದೆ. ನಿಮ್ಮ ಮಧ್ಯಪ್ರವೇಶ ಇವುಗಳನ್ನು ಮರೆಮಾಚುತ್ತದೆ ಎಂದು ನಾನು ಭಾವಿಸುತ್ತೇನೆ. ಮೋದಿಯವರಿಗೆ ರಾಜತಾಂತ್ರಿಕತೆಯ ಬಗ್ಗೆ ಸ್ವಲ್ಪ ಪಾಠ ಮಾಡಿ ಎಂದು ತಿಳಿಸಿದ್ದಾರೆ.
ಹ್ಯೂಸ್ಟನ್ ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಅಬ್ ಕಿ ಬಾರ್ ಟ್ರಂಪ್ ಸರ್ಕಾರ ಘೋಷಣೆಯನ್ನು ಬಳಸಿದ್ದರು. ರ್ಯಾಲಿಯಲ್ಲಿ 50,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಅಮೆರಿಕನ್ನರು ಇದ್ದರು. ಕಾರ್ಯಕ್ರಮದಲ್ಲಿ ಟ್ರಂಪ್ ಕೂಡ ಹಾಜರಿದ್ದರು.