ದೇಶ

ಗಾಂಧಿ ಸಂಕಲ್ಪ ಯಾತ್ರೆಗೆ ಅಮಿತ್ ಶಾ ಚಾಲನೆ, ಏಕ-ಬಳಕೆ ಪ್ಲಾಸ್ಟಿಕ್ ಬಳಸದಂತೆ ಮನವಿ

Lingaraj Badiger

ನವದೆಹಲಿ: ಪರಿಸರಕ್ಕೆ ಅಪಾಯಕಾರಿಯಾದ ಕಾರಣ ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದನ್ನು ತಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರು ಬುಧವಾರ ಮನವಿ ಮಾಡಿದರು.

ಇಂದು ದೆಹಲಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಅಂಗವಾಗಿ ಭಾರತೀಯ ಜನತಾ ಪಕ್ಷದ ಗಾಂಧಿ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ, "ಪ್ಲಾಸ್ಟಿಕ್ ಪಾಲಿಬ್ಯಾಗ್‌ಗಳ ಬಳಕೆಯನ್ನು ತಪ್ಪಿಸಲು ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ. ಅವು ಪರಿಸರ ಮತ್ತು ನಮ್ಮ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಶಾಪಿಂಗ್‌ಗೆ ಹೊರಡುವಾಗ ಎಲ್ಲರೂ ಬಟ್ಟೆಯ ಚೀಲವನ್ನು ಕೊಂಡೊಯ್ಯಬೇಕು" ಎಂದು ಹೇಳಿದರು.

'ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧ' ಅಭಿಯಾನವನ್ನು ಬೃಹತ್ ಆಂದೋಲನ ಮಾಡಲು ಅವರು ಕರೆ ನೀಡಿದರು. "ಪ್ರಧಾನಿ ನರೇಂದ್ರ ಮೋದಿ ಅವರು ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ದೇಶವನ್ನು ಮುಕ್ತಗೊಳಿಸುವುದಾಗಿ ಪ್ರತಿಜ್ಞೆ ಮಾಡಿರುವುದರಿಂದ ಈ ಅಭಿಯಾನವನ್ನು ಬೃಹತ್ ಆಂದೋಲನವನ್ನಾಗಿ ಮಾಡುವುದು ಎಲ್ಲ ಜನರ ಮತ್ತು ಪಕ್ಷದ ಕಾರ್ಯಕರ್ತರ ಜವಾಬ್ದಾರಿಯಾಗಿದೆ" ಎಂದು ಶಾ ಹೇಳಿದರು.

ಏಕ-ಬಳಕೆಯ ಪ್ಲಾಸ್ಟಿಕ್ ಮನುಷ್ಯರಿಗೆ ಹಾನಿಕಾರಕವಲ್ಲ. ಆದರೆ ಪ್ರಾಣಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದರು.

"ಮಾಲಿನ್ಯ ಮುಕ್ತ ಸ್ವಚ್ಛ ಭಾರತವನ್ನು ನಿರ್ಮಿಸುವಲ್ಲಿ ನಾವು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಮುಂದುವರಿಯುತ್ತೇವೆ" ಎಂದು ಶಾ ಹೇಳಿದರು.

ಗಾಂಧೀ ಜಿ ಅವರು ಸತ್ಯ ಮತ್ತು ಅಹಿಂಸೆಯ ವಿಶ್ವ ಮಾರ್ಗವನ್ನು ತೋರಿಸಿದ್ದಾರೆ. ನಾವು ಗಾಂಧೀಜಿಯ ತತ್ವಗಳ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸುತ್ತೇವೆ ಎಂದರು.

ಈ ವರ್ಷ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯ 150ನೇ ವರ್ಷ. ಇದನ್ನು ರಾಷ್ಟ್ರವನ್ನು ಮುಂದೆ ಕೊಂಡೊಯ್ಯುವ ನಿರ್ಣಯದ ವರ್ಷವನ್ನಾಗಿ ಮಾಡಬೇಕು ಎಂದು ಅವರು ಪಕ್ಷದ ಕಾರ್ಯಕರ್ತರನ್ನು ಕರೆ ನೀಡಿದರು.

ಮುಂದಿನ ವರ್ಷ ಜನವರಿ 31ರಂದು ಈ ಸಂಕಲ್ಪ ಯಾತ್ರೆ ಮುಕ್ತಾಯಗೊಳ್ಳಲಿದೆ.

SCROLL FOR NEXT