ದೇಶ

ಪಂಜಾಬ್‍ನಲ್ಲಿ ಮತ್ತೆ ಎರಡು ಪಾಕ್‍ನ ಡ್ರೋಣ್ ಗಳ ಹಾರಾಟ

Srinivasamurthy VN

ಚಂಡೀಗಢ: ಪಂಜಾಬ್ ನಲ್ಲಿ ಮತ್ತೆ ಪಾಕಿಸ್ತಾನ ಮೂಲದ ಎರಡು ಡ್ರೋಣ್ ಗಳು ಹಾರಾಟ ನಡೆಸಿರುವ ಆತಂಕಕಾರಿ ಬೆಳವಣಿಗೆ ವರದಿಯಾಗಿದೆ.

ಪಂಜಾಬ್‍ನ ಫಿರೋಜ್‍ಪುರ ಜಿಲ್ಲೆಯ ಹುಸೇನಿವಾಲಾ ಗಡಿಯ ಮೂಲಕ ಡ್ರೋಣ್ ಭಾರತ ಪ್ರವೇಶಿಸುತ್ತಿರುವುದನ್ನು ಸೋಮವಾರ ತಡರಾತ್ರಿ ಪತ್ತೆ ಹಚ್ಚಲಾಗಿದ್ದು, ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಸೋಮವಾರ ರಾತ್ರಿ ಫೀರೋಜ್‍ಪುರ ಹುಸೇನಿವಾಲಾ ಪೋಸ್ಟ್ ನಲ್ಲಿರುವ ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಸಿಬ್ಬಂದಿ ಪಾಕಿಸ್ತಾನದ ಕಡೆಯಿಂದ ಭಾರತೀಯ ಭೂಪ್ರದೇಶಕ್ಕೆ ಪ್ರವೇಶಿಸುವ ಡ್ರೋನ್ ಅನ್ನು ಗುರುತಿಸಿದ್ದಾರೆ. ಈ ಕುರಿತು ಬಿಎಸ್‍ಎಫ್ ಪಂಜಾಬ್ ಪೊಲೀಸರಿಗೆ ಎಚ್ಚರಿಸಿದೆ. ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಧ್ಯರಾತ್ರಿಯ ಹೊತ್ತಿಗೆ ವೀಕ್ಷಣೆಯಿಂದ ಕಣ್ಮರೆಯಾಗುವ ಮೊದಲು ಡ್ರೋನ್ ಭಾರತದ ಭೂಪ್ರದೇಶಕ್ಕೆ ಆಗಮಿಸಿದ್ದು, ಗಡಿ ಹೊರ ಠಾಣೆಯ ಒಂದು ಕಿ.ಮೀ. ಹತ್ತಿರಕ್ಕೆ ಬಂದಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಅಲ್ಲಿನ ಬಿಎಸ್‍ಎಫ್ ಸಿಬ್ಬಂದಿ ಪಾಕಿಸ್ತಾನದ ಡ್ರೋನ್‍ಗಳು ರಾತ್ರಿ 10ರಿಂದ 10.40ರ ನಡುವೆ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ನಾಲ್ಕು ಬಾರಿ ಅನುಮಾನಾಸ್ಪದವಾಗಿ ಹಾರುತ್ತಿರುವುದನ್ನು ನೋಡಿದ್ದರು.

ಕೆಲವು ವಾರಗಳ ಹಿಂದೆ ರಾಜ್ಯದ ಟಾರ್ನ್ ತರಣ್ ಜಿಲ್ಲೆಯಲ್ಲಿ ಮಾನವರ ರಹಿತ ವೈಮಾನಿಕ ವಾಹನಗಳು ಕಾರ್ಯಾಚರಣೆ ನಡೆಸಿದ್ದವು. ಅಲ್ಲದೆ, ಹೆಚ್ಚಿನ ಸಂಖ್ಯೆಯ ಎಕೆ-47 ರೈಫಲ್‍ಗಳು, ಉಪಗ್ರಹ ಫೋನ್‍ಗಳು ಹಾಗೂ ಗ್ರನೇಡ್‍ಗಳು ಪತ್ತೆಯಾಗಿದ್ದ ಹಿನ್ನೆಲೆ ಈ ಬೆಳವಣಿಗೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ.

ಕಳೆದ ತಿಂಗಳು ಪಂಜಾಬ್ ಪೊಲೀಸರು ಅಮೃತಸರದ ತರಣ್ ತರಣ್ ನಲ್ಲಿ ಪಾಕಿಸ್ತಾನದ ಡ್ರೋನ್‍ಗಳನ್ನು ಪತ್ತೆ ಹಚ್ಚಿದ್ದರು. ಈ ಡ್ರೋನ್ ಗಳು ಎಂಟು ಎಕರೆ ಪ್ರದೇಶದಲ್ಲಿ ಎಕೆ-47 ಬಂದೂಕುಗಳು, ಗ್ರೆನೇಡ್‍ಗಳು ಹಾಗೂ ಉಪಗ್ರಹ ಆಧಾರಿತ ಫೋನ್‍ಗಳನ್ನು ಕೆಳಗಡೆ ಉದುರಿಸಿತ್ತು. ಈ ಡ್ರೋನ್‍ಗಳು 5 ಕೆ.ಜಿ. ತೂಕವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಕಡಿಮೆ ಅಂತರದಲ್ಲಿ ಹಾಗೂ ಬಹಳ ವೇಗವಾಗಿ ಚಲಿಸುವ ಕಾರಣ ಸುಲಭವಾಗಿ ಈ ಡ್ರೋನ್‍ಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT