ದೇಶ

2 ದಿನದಲ್ಲಿ ಐದು ಸಭೆ: ಕ್ಸಿ- ಮೋದಿ ಮಹಾಬಲಿಪುರಂ ಭೇಟಿ ಪ್ರಮುಖಾಂಶಗಳು

Srinivasamurthy VN

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ 2 ದಿನಗಳ ಭಾರತ ಪ್ರವಾಸಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಒಟ್ಟು ಐದು ಪ್ರಮುಖ ಸಭೆಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಅಕ್ಟೋಬರ್ 11 ಅಂದರೆ ನಾಳೆ ಭಾರತಕ್ಕೆ ಬಂದಿಳಿಯಲಿರುವ ಕ್ಸಿ ಜಿನ್ ಪಿಂಗ್ ಸಂಜೆ 5 ಗಂಟೆಗೆ ತಮಿಳುನಾಡಿನ ಮಹಾಬಲಿ ಪುರಂಗೆ ಆಗಮಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ನಡುವಿನ ಸಾಮಾನ್ಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಪ್ರಾದೇಶಿಕ ಮತ್ತು ಜಾಗತಿಕ ಪ್ರಾಮುಖ್ಯತೆ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದ್ದು, ಇದಲ್ಲದೆ ಭಾರತ ಚೀನಾ ನಡುವಿನ ಶೀಥಲ ಸಮರಕ್ಕೆ ಕಾರಣವಾಗಿದ್ದ ಲಡಾಖ್ ವಿಚಾರ, ಚೀನಾದ 5ಜಿ ನೆಟ್ವರ್ಕ್ ಪಾಲಿಸಿ, ಉಗ್ರ ನಿಗ್ರಹ ಕಾರ್ಯಾಚರಣೆ, ಸುಸ್ಥಿರ ಸಮುದ್ರ ಆರ್ಥಿಕತೆ ಸೇರಿದಂತೆ ಹಲವು ವಿಚಾರಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ.

ವಿದೇಶಾಂಗ ಇಲಾಖೆ ಒಟ್ಟು ಐದು ಸಭೆಗಳನ್ನು ಏರ್ಪಡಿಸಿದ್ದು, ಅಕ್ಟೋಬರ್ 12ರಂದು ಬೆಳಿಗ್ಗೆ 10 ಗಂಟೆಗೆ ಪಂಚತಾರಾ ಹೋಟೆಲ್ ತಾಜ್ ಫಿಶರ್ಮನ್ಸ್ ಕೋವ್ ರೆಸಾರ್ಟ್ ಮತ್ತು ಸ್ಪಾ ನಲ್ಲಿ ಸಭೆ ಸೇರಲಿದ್ದಾರೆ. ಬಳಿಕ ಮಧ್ಯಾಹ್ನ 1.30 ಕ್ಕೆ ಚೆನ್ನೈನಿಂದ ನಿರ್ಗಮಿಸುವ ಮೊದಲು ಕ್ಸಿ ಮತ್ತೆ ಬೆಳಿಗ್ಗೆ 10.50 ಕ್ಕೆ ಭಾರತೀಯ ನಿಯೋಗವನ್ನು ಭೇಟಿ ಮಾಡಿ ಮಹತ್ವದ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಮಧ್ಯಾಹ್ನದ ಭೋಜನ ಕೂಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಇನ್ನು ನಾಳೆ ಮಹಾಬಲಿ ಪುರಂಗೆ ಆಗಮಿಸಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಅಲ್ಲಿನ ವಿಶ್ವಪಾರಂಪರಿಕ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಯುನೆಸ್ಕೋ ವಿಶ್ವಪಾರಂಪರಿಕ ಸ್ಥಳ ಮಾನ್ಯತೆ ನೀಡಿರುವ ಅರ್ಜುನನ ತಪಸ್ಸು ಮಾಡಿದ ಸ್ಥಳ, ಪಂಚ ರಥಗಳು ಮತ್ತು ತೀರ ದೇವಾಲಯಗಳಿಗೆ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆ ವೇಳೆಗೆ ತೀರ ದೇವಾಲಯಕ್ಕೆ ಕ್ಸಿ ಜಿನ್ ಪಿಂಗ್ ಮತ್ತು ಮೋದಿ ಆಗಮಿಸಲಿದ್ದು, 6.45ಕ್ಕೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ವಿಶೇಷ ಭೋಜನಕೂಟ ಏರ್ಪಡಿಸಲಿದ್ದಾರೆ.

SCROLL FOR NEXT