ದೇಶ

ವ್ಯಾಪಾರ ಕೊರತೆ ಕುರಿತು ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದೆ: ವಿದೇಶಾಂಗ ಕಾರ್ಯದರ್ಶಿ 

Manjula VN

ಚೀನಾ-ಭಾರತ ಅನೌಪಚಾರಿಕ ಶೃಂಗಸಭೆ ಅಂತ್ಯ: ನೇಪಾಳಕ್ಕೆ ತೆರಳಿದ ಚೀನಾ ಅಧ್ಯಕ್ಷ ಕ್ಸಿ'ಜಿನ್'ಪಿಂಗ್

ಚೆನ್ನೈ: ವ್ಯಾಪಾರ ಕೊರತೆ ಕುರಿತ ಭಾರತದ ಕಳವಳ ಪರಿಹರಿಸಲು ಪ್ರಮಾಣಿಕ ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆಯವರು ಶನಿವಾರ ಹೇಳಿದ್ದಾರೆ. 

ಚೀನಾ ಅಧ್ಯಕ್ಷ ಕ್ಸಿ'ಜಿನ್'ಪಿಂಗ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಡುವೆ ನಡೆದ ಅನೌಪಚಾರಿಕ ಶೃಂಗಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಗೋಖಲೆಯವರು, ವ್ಯಾಪಾರ ಕೊರತೆ ಕುರಿತಂತೆ ಪ್ರಾಮಾಣಿಕ ಕ್ರಮ ಕೈಗೊಳ್ಳಲು ಚೀನಾ ಸಿದ್ಧವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿ ಮಾತುಕತೆ ನಡೆಸಲು ಚೀನಾ ಭರವಸೆ ನೀಡಿದೆ ಎಂದು ಹೇಳಿದ್ದಾರೆ. 

ಸುಮಾರು 90 ನಿಮಿಷಗಳ ಕಾಲ ಉಭಯ ರಾಷ್ಟ್ರಗಳ ನಾಯಕರು ಮಾತುಕತೆ ನಡೆಸಿದರು. ಮಾತುಕತೆ ಬಳಿಕ ಪ್ರಧಾನಿ ಮೋದಿಯವರು ಆಯೋಜಿಸಿದ್ದ ಭೋಜನಕೂಟದಲ್ಲಿ ಕ್ಸಿ'ಜಿನ್'ಪಿಂಗ್ ಅವರು ಭಾಗಿಯಾದರು. ಬಳಿಕ 6 ಗಂಟೆಗಳ ಕಾಲ ಒಂದರ ಹಿಂದೆ ಒಂದು ಸಭೆಗಳನ್ನು ನಡೆಸಿದ ಉಭಯ ನಾಯಕರು, ಶೃಂಗಸಭೆಯಲ್ಲಿ ಮಾತುಕತೆ ನಡೆಸಿದರು ಎಂದು ತಿಳಿಸಿದ್ದಾರೆ. 

ವ್ಯಾಪಾರ, ಹೂಡಿಕೆ ಹಾಗೂ ಸೇವೆಗಳ ಕುರಿತು ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಲು ಹೊಸ ಕಾರ್ಯವಿಧಾನಗಳನ್ನು ಸ್ಥಾಪಿಸಲಾಗುತ್ತದೆ. ಶೀಘ್ರದಲ್ಲೇ ಈ ಬಗ್ಗೆ ಉಭಯ ರಾಷ್ಟ್ರಗಳ ನಡುವೆ ಚರ್ಚೆ ನಡೆಯಲಿದ್ದು, ಚೀನಾ ಉಪಾಧ್ಯಕ್ಷರು ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಜನರಿಂದ ಜನರನ್ನು ಸಂಪರ್ಕಿಸುವತ್ತ ಹೊಸ ಚಿಂತನೆಗಳು ನಡೆಯುತ್ತಿದ್ದು, ಚರ್ಚೆಯಲ್ಲಿ ಎರಡು ದೇಶಗಳ ಸಾರ್ವಜನಿಕರನ್ನು ಒಗ್ಗೂಡಿಸಲು ನಿರ್ಧರಿಸಲಾಯಿತು. ಈ ಕುರಿತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಮುಂದಿನ ಶೃಂಗಸಭೆಗೆ ಕ್ಸಿ'ಜಿನ್'ಪಿಂಗ್ ಅವರು ಪ್ರಧಾನಿ ಮೋದಿಯವರನ್ನು ಚೀನಾಗೆ ಆಹ್ವಾನಿಸಿದ್ದಾರೆ. ಈ ಆಹ್ವಾನವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದಾರೆ. ಶೃಂಗಸಭೆಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿಯಾಗಲಿದೆ ಎಂದಿದ್ದಾರೆ. 

ಮಾನಸ ಸರೋವರ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಸ್ಥಾಪನೆ ಕುರಿತಂತೆ ಹಾಗೂ ತಮಿಳುನಾಡು ರಾಜ್ಯ ಮತ್ತು ಚೀನಾ ಫುಜಿಯಾನ್ ಪ್ರಾಂತ್ಯದ ನಡುವಿನ ಸಂಪರ್ಕ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆಂದು ತಿಳಿಸಿದ್ದಾರೆ. 

ನೇಪಾಳಕ್ಕೆ ತೆರಳಿದ ಚೀನಾ ಅಧ್ಯಕ್ಷ
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗಿನ ಎರಡು ದಿನಗಳ ಯಶಸ್ವಿ ಅನೌಪಚಾರಿಕ ಶೃಂಗಸಭೆ ಬಳಿಕ ಚೀನಾ ಅಧ್ಯಕ್ಷ ಕ್ಸಿ'ಜಿನ್'ಪಿಂಗ್ ಅವರು ನೇಪಾಳಕ್ಕೆ ತೆರಳಿದ್ದಾರೆ. ಚೆನ್ನೈನ ಕೊವಲಂನ ತಾಜ್ ಫಿಶರ್'ಮ್ಯಾನ್ಸ್ ಕೋವ್ ನಿಂದ ಕ್ಸಿ ಅವರು ನೇಪಾಳಕ್ಕೆ ತೆರಳಿದ್ದಾರೆ. 

SCROLL FOR NEXT