ದೇಶ

ಭಾರತದ ಆರ್ಥಿಕತೆ ಅತ್ಯಂತ ದುರ್ಬಲವಾಗಿದೆ, ಸುಧಾರಿಸುವ ಭರವಸೆಯೂ ಇಲ್ಲ: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

Lingaraj Badiger

ನವದೆಹಲಿ: ಭಾರತದ ಆರ್ಥಿಕತೆ ಅತ್ಯಂತ ದುರ್ಬಲವಾಗಿದ್ದು, ಸುಧಾರಿಸುವ ಯಾವುದೇ ಭರವಸೆಯೂ ಇಲ್ಲ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಭಾರತೀಯ ಮೂಲದ ಅಭಿಜಿತ್‌ ಬ್ಯಾನರ್ಜಿ ಅವರು ಸೋಮವಾರ ಹೇಳಿದ್ದಾರೆ.

ಪ್ರಸ್ತುತ ಅಂಕಿ ಅಂಶಗಳನ್ನು ಗಮನಿಸಿದರೆ, ಭಾರತದ ಆರ್ಥಿಕತೆ ಅಸ್ಥಿರವಾಗಿದ್ದು, ತಕ್ಷಣಕ್ಕೆ ಸುಧಾರಿಸುವ ಯಾವ ಭರವಸೆಯೂ ಇಲ್ಲ ಎಂದು ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಬ್ಯಾನರ್ಜಿ ಅವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಕಳೆದ ಐದಾರು ವರ್ಷಗಳಲ್ಲಿ ನಾವು ಕನಿಷ್ಠ ಅಭಿವೃದ್ಧಿಯನ್ನಾದರೂ ನೋಡಿದೆವು. ಈಗ ಆ ಭರವಸೆಯೂ ಇಲ್ಲವಾಗಿದೆ ಅಭಿಜಿತ್‌ ಬ್ಯಾನರ್ಜಿಅವರು ಹೇಳಿದ್ದಾರೆ.

ವೃತ್ತಿ ಜೀವನದಲ್ಲಿ ನಾನು ಇಷ್ಟು ಬೇಗ ಪ್ರಶಸ್ತಿ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ ಎಂದು 58 ವರ್ಷದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರು ತಿಳಿಸಿದ್ದಾರೆ.

ನನ್ನ ಸಂಶೋಧನೆಗಾಗಿ ನಾನು ಭಾರತದ ಪಶ್ಚಿಮ ಬಂಗಾಳ, ದಕ್ಷಿಣ ಆಫ್ರಿಕಾ, ಇಂಡೋನೆಷ್ಯಾ ಮತ್ತು ಚೀನಾದಲ್ಲಿ ಕೆಲಸ ಮಾಡಿದ್ದೇನೆ. ಕಳೆದ 20 ವರ್ಷಗಳಿಂದ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಬಡತನ ನಿವಾರಣೆಗೆ ಪರಿಹಾರಗಳನ್ನು ನೀಡಲು ನಾವು ಪ್ರಯತ್ನಿಸಿದ್ದೇವೆ ಎಂದು ಅವರು ತಮ್ಮ ಸಂಶೋಧನೆಯನ್ನು ತೆರೆದಿಟ್ಟಿದ್ದಾರೆ.

ಜಾಗತಿಕ ಬಡತನ ನಿರ್ಮೂಲನೆಗೆ ತೋರಿದ ಪ್ರಯೋಗಾತ್ಮಕ ನಡೆಗಳಿಗಾಗಿ ಅಭಿಜಿತ್‌ ಬ್ಯಾನರ್ಜಿ ಹಾಗೂ ಅವರ ಪತ್ನಿ ಈಸ್ಟರ್‌ ಡುಫ್ಲೋ ಅವರು ಮೈಖಲ್‌ ಕ್ರೆಮರ್‌ ಜೊತೆ ನೊಬೆಲ್‌ ಪ್ರಶಸ್ತಿ ಹಂಚಿಕೊಂಡಿದ್ದಾರೆ.

SCROLL FOR NEXT