ದೇಶ

ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಮೌಖಿಕ ಅಥವಾ ಲಿಖಿತ ಪರೀಕ್ಷೆ ಬೇಡ: ಎನ್ ಸಿಇಆರ್ ಟಿ 

Sumana Upadhyaya

ನವದೆಹಲಿ:ಪೂರ್ವ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಯಾವುದೇ ಮೌಖಿಕ ಅಥವಾ ಬರಹದ ಪರೀಕ್ಷೆ ನೀಡಬಾರದು ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ(ಎನ್ ಸಿಇಆರ್ ಟಿ) ನಿಷೇಧ ಹೇರಿದೆ. ಇದು ಮಕ್ಕಳ ಬೆಳವಣಿಗೆಗೆ ತೊಂದರೆಯಾಗಿದ್ದು ಪೋಷಕರ ಆಸೆ-ಆಕಾಂಕ್ಷೆಗಳನ್ನು ತಪ್ಪುದಾರಿಗೆಳೆಯುವ ಅಸಮರ್ಪಕ ಸಂಪ್ರದಾಯ ಎಂದು ಹೇಳಿದೆ.


ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಪಠ್ಯಕ್ರಮವನ್ನು ಅನುಸರಿಸುವ ಸಂಸ್ಥೆಯಾದ ಎನ್ ಸಿಇಆರ್ ಟಿ ಹೇಳುವ ಪ್ರಕಾರ ಪೂರ್ವ ಪ್ರಾಥಮಿಕ ಹಂತದಲ್ಲಿ ಪಾಸ್‌ ಅಥವಾ ಫೇಲ್‌ ಎಂದು ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವಂತಿಲ್ಲ. ಜೊತೆಗೆ ಇದು ಇದು ಪೋಷಕರ ತಿಳುವಳಿಕೆ ಕೊರತೆಯಿಂದ ಉಂಟಾದ ಹಾನಿಕಾರಕ ಹಾಗೂ ಅನಪೇಕ್ಷಿತ ಅಭ್ಯಾಸ ಎಂದು ಅಭಿಪ್ರಾಯ ಪಟ್ಟಿದೆ. ಪೂರ್ವ ಪ್ರಾಥಮಿಕ ಹಂತದ ಮಕ್ಕಳನ್ನು ಯಾವ ರೀತಿ ಮೌಲ್ಯಮಾಪನ ಮಾಡಬೇಕು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಮಾರ್ಗಸೂಚಿಗಳೇನೇನು ಎಂಬುದನ್ನು ಎನ್ ಸಿಇಆರ್ ಟಿ ಪಟ್ಟಿ ಮಾಡಿದ್ದು, ದಾಖಲೆಗಳು, ಪರಿಶೀಲನಾ ಪಟ್ಟಿ, ವಿಷಯ ಹಾಗೂ ಇತರ ಮಕ್ಕಳೊಂದಿಗೆ ವಿದ್ಯಾರ್ಥಿಗಳ ಸಂವಹನ ಆಧರಿಸಿ ವಿದ್ಯಾರ್ಥಿಗಳ ಪ್ರಗತಿಯನ್ನು ಅಳೆಯಬೇಕು. 

ಎನ್ ಸಿಇಆರ್ ಟಿ ಏನೇನು ಹೇಳುತ್ತದೆ: ನಿರಂತರವಾಗಿ ಪ್ರತಿ ಮಗುವಿನ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಬೇಕು. ಮಕ್ಕಳೊಂದಿಗೆ ನಿರಂತರ ಸಂವಹನ, ಪರಿಶೀಲನೆ, ಉಪಾಖ್ಯಾನ ದಾಖಲೆಗಳು, ವೈಯಕ್ತಿಕ ದಾಖಲೆಗಳನ್ನು ಪರಿಶೀಲಿಸುತ್ತಿರಬೇಕು. 


ಮಕ್ಕಳನ್ನು ನಿರಂತರವಾಗಿ ನಿಗಾವಹಿಸಿದ ನಂತರ ಅವರ ಬಗ್ಗೆ ಲಿಖಿತ ದಾಖಲೆಗಳನ್ನು ಶಿಕ್ಷಕರು ಬರೆದಿಟ್ಟುಕೊಳ್ಳಬೇಕು. ಮಕ್ಕಳು ಹೇಗೆ ಸಮಯ ಕಳೆಯುತ್ತಾರೆ, ಅವರ ಸಾಮಾಜಿಕ ಸಂಬಂಧಗಳು, ಭಾಷೆಯ ಬಳಕೆ, ಪರಸ್ಪರ ಕ್ರಿಯೆಯ ವಿಧಾನಗಳು, ಆರೋಗ್ಯ ಮತ್ತು ಪೋಷಣೆಯ ಅಭ್ಯಾಸದ ಬಗ್ಗೆ ಮಾಹಿತಿಗಳನ್ನು ಶಿಕ್ಷಕರು ಶಾಲೆಯಲ್ಲಿ ಪಡೆದುಕೊಂಡು ಬರೆದಿಟ್ಟುಕೊಳ್ಳಬೇಕು.


ಪ್ರತಿ ಮಗುವಿನ ದಾಖಲೆ ಪೋಷಕರು ಮತ್ತು ಮಕ್ಕಳಿಗೆ ವೀಕ್ಷಿಸಲು ಲಭ್ಯವಿರಬೇಕು ಮತ್ತು ಮಗು ಪೂರ್ವ ಪ್ರಾಥಮಿಕ ಹಂತದಿಂದ ಪ್ರಾಥಮಿಕ ಶಾಲೆಗೆ ಹೋಗುವವರೆಗೆ ಅದು ಪೂರ್ವ ಶಾಲೆಯ ದಾಖಲೆಗಳಲ್ಲಿರಬೇಕು. ಎಲ್ಲಾ ಪೋಷಕರು ತಮ್ಮ ಮಗುವಿನ ಲಿಖಿತ ಮತ್ತು ಮೌಖಿಕ ಪ್ರಗತಿಯ ಸಾರಾಂಶ ವರದಿಯನ್ನು ವರ್ಷಕ್ಕೆ ಎರಡು ಬಾರಿಯಾದರೂ ಸ್ವೀಕರಿಸಬೇಕು. ಶಾಲೆಗಳಲ್ಲಿ ಇರಬೇಕಾದ ಮೂಲಭೂತ ಸೌಕರ್ಯ, ಶಿಕ್ಷಕರ ಅರ್ಹತೆ ಮತ್ತು ವೇತನ, ಪ್ರವೇಶಾತಿ ಪ್ರಕ್ರಿಯೆ, ದಾಖಲೆಗಳ ನಿರ್ವಹಣೆ, ಕಾರ್ಯವಿಧಾನ ಹಾಗೂ ಶಿಕ್ಷಕ ಮತ್ತು ಪೋಷಕರ ನಡುವಿನ ಸಮನ್ವಯತೆಯ ಬಗ್ಗೆ ಎನ್ ಸಿಇಆರ್ ಟಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

SCROLL FOR NEXT