ದೇಶ

ಕರ್ತಾರ್‌ಪುರ್ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದು ದೇಶ ವಿಭಜನೆಯ ವೇಳೆ ನಡೆದ ಪ್ರಮಾದ; ಪ್ರಧಾನಿ ಮೋದಿ

Srinivas Rao BV

ಸಿರ್ಸಾ: ಏಳು ದಶಕಗಳಿಂದ ಪಾಕಿಸ್ತಾನದ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರದೊಂದಿಗೆ ಭಾರತವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಿಸಲು ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ನಡೆಸಲಿಲ್ಲ ಎಂದು ದೂಷಿಸಿರುವ ಪ್ರಧಾನಿ ನರೇಂದ್ರ ಮೋದಿ, ಅಂತರರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪವಿತ್ರ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರವನ್ನು ನೆರೆಯ ದೇಶಕ್ಕೆ ಬಿಟ್ಟುಕೊಟ್ಟಿದ್ದು ದೇಶ ವಿಭಜನೆಯ ವೇಳೆ ಮಾಡಿದ ಮಹಾ ಪ್ರಮಾದ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಯಾಣದ ಸಿರ್ಸಾ ಜಿಲ್ಲೆಯ ಎಲ್ಲೆನಾಬಾದ್‌ನಲ್ಲಿ ಶನಿವಾರ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 70 ವರ್ಷಗಳಿಂದ ನಿರ್ಮಿಸಲು ಸಾಧ್ಯವಾಗದಿದ್ದ ಈ ಕಾರಿಡಾರ್ ಮುಂದಿನ ತಿಂಗಳು ಉದ್ಘಾಟನೆಗೊಳ್ಳುತ್ತಿದೆ. ಇದರಿಂದ ಪವಿತ್ರ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರದ ಯಾತ್ರೆ ಕೈಗೊಳ್ಳುವ ಸಿಖ್ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದರು.
ಕಳೆದ ಏಳು ದಶಕಗಳಿಂದ ಬೈನಾಕ್ಯುಲರ್ ಮೂಲಕ ಪವಿತ್ರ ಕರ್ತಾರ್ ಪುರ್ ಗುರುದ್ವಾರ ಸಾಹಿಬ್ ನೋಡುವುದಕ್ಕಿಂತ ದುರದೃಷ್ಟಕರ ಜಗತ್ತಿನಲ್ಲಿ ಇನ್ಯಾವುದಿದೆ ಎಂದು ಮೋದಿ ಪ್ರಶ್ನಿಸಿದರು.

1947ರಲ್ಲಿ ದೇಶ ವಿಭಜನೆಯ ವೇಳೆ ಗಡಿ ನಿಗಧಿಪಡಿಸಿದರವರು ಇದಕ್ಕೆ ಕಾರಣ. ಗುರುಗಳು ಹಾಗೂ ಭಕ್ತರನ್ನು ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ಬೇರೆ ಬೇರೆ ಮಾಡುತ್ತಿದ್ದೇವೆ ಎಂಬ ಆಲೋಚನೆ ಅವರಿಗೆ ಬರಲು ಸಾಧ್ಯವಾಗಲಿಲ್ಲ. ನಂತರ ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಈ ಆಲೋಚನೆಯನ್ನೇ ಮಾಡಲಿಲ್ಲ ಎಂದು ಮೋದಿ ಟೀಕಿಸಿದರು. ಕರ್ತಾರ್‌ಪುರ ಕಾರಿಡಾರ್ ಉದ್ಘಾಟನಾ ಸಮಾರಂಭ ವಿಶ್ವದಾದ್ಯಂತ ಆಚರಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದ್ದು, ಒಂದು ರಾಷ್ಟ್ರೀಯ ಹೆದ್ದಾರಿಗೆ ಗುರುನಾನಕ್ ದೇವ್ ಅವರ ಹೆಸರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದರು.

ಕಾಂಗ್ರೆಸ್ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಭಾರತೀಯ ಸಂಪ್ರದಾಯದ ಬಗ್ಗೆ ಗೌರವವಿಲ್ಲ ಎಂದು ಮೋದಿ ಆರೋಪಿಸಿದರು.
ಕಾಂಗ್ರೆಸ್ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎಂದೂ ಗೌರವಿಸಲಿಲ್ಲ. ಪೂಜಾ ಸ್ಥಳಗಳ ವಿಷಯದಲ್ಲಿ ಅನುಸರಿಸಿದ ಧೋರಣೆಯನ್ನೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಸರಿಸಿ, ಕಾಶ್ಮೀರ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತೆ ವಿನಃ ಯಾವುದೇ ಪರಿಹಾರ ರೂಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿಲ್ಲ ಪ್ರಧಾನಿ ಆರೋಪಿಸಿದರು.

SCROLL FOR NEXT