ದೇಶ

ಬಂಧಿತ ಕೆಲವು ಕಾಶ್ಮೀರಿ ನಾಯಕರಿಂದ ಹಿಂಸಾಚಾರಕ್ಕೆ ಪ್ರಚೋದನೆ: ರಾಮ್ ಮಾಧವ್

Lingaraj Badiger

ಶ್ರೀನಗರ: ಬಂಧಿತ ಕೆಲವು ಕಾಶ್ಮೀರಿ ರಾಜಕಾರಣಿಗಳು ಕಣಿವೆ ರಾಜ್ಯದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದು, ಗನ್ ಕೈಗೆತ್ತಿಕೊಳ್ಳುವಂತೆ ಮತ್ತು ಜೀವ ತ್ಯಾಗ ಮಾಡುವಂತೆ ಜನತೆಗೆ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕರು ರಾಮ್ ಮಾಧವ್ ಅವರು ಭಾನುವಾರ ಆರೋಪಿಸಿದ್ದಾರೆ.

ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ನಂತರ ಇದೇ ಮೊದಲ ಬಾರಿಗೆ ಶ್ರೀನಗರದ ಟ್ಯಾಗೋರ್ ಹಾಲ್‌ನಲ್ಲಿ ಪಕ್ಷದ ಯುವ ವಿಭಾಗದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಾಧವ್, “ಇಲ್ಲಿಯವರೆಗೆ ಕಾಶ್ಮೀರದ ಕೆಲವು ಕುಟುಂಬಗಳಿಗೆ ಅಥವಾ ಕೆಲವು ನಾಯಕರಿಗೆ ಎಲ್ಲವನ್ನೂ ಮಾಡಲಾಗುತ್ತಿತ್ತು. ಆದರೆ ಈಗ ಹೊಸ ಸರ್ಕಾರ ಸಬ್ ಕಾ ಸಾಥ್ ಸಬ್ ಕಾ ವಿಕಾಸಕ್ಕಾಗಿ ಕೆಲಸ ಮಾಡುತ್ತಿದೆ ಮತ್ತು ಇದು ಮೋದಿ ಸರ್ಕಾರದ ಧ್ಯೇಯವಾಕ್ಯ ಎಂದು ಹೇಳಿದರು.

ಈಗ ಬಂಧಿತ ಸುಮಾರು 200ರಿಂದ 300 ಜನ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಸಹಕರಿಸಿದರೆ ಅವರು ಶೀಘ್ರದಲ್ಲೇ ಜೈಲಿನಿಂದ ಹೊರ ಬರುತ್ತಾರೆ. ಒಂದು ವೇಳೆ ಸಹಕರಿಸದಿದ್ದರೆ ಮತ್ತಷ್ಟು ದಿನ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಎಚ್ಚರಿಸಿದರು.

'ಕಾಶ್ಮೀರದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಈಗ ಕೇವಲ ಎರಡು ಮಾರ್ಗಗಳಿವೆ. ಅದಕ್ಕೆ ಯಾರೇ ಅಡ್ಡ ಬಂದರು ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಇದಕ್ಕೆ ಭಾರತದಲ್ಲಿ ಅನೇಕ ಜೈಲುಗಳಿವೆ ' ರಾಮ್ ಮಾಧವ್ ಹೇಳಿದರು. 

SCROLL FOR NEXT