ದೇಶ

ಕರ್ತಾರ್ ಪುರ ಒಪ್ಪಂದಕ್ಕೆ ಒಪ್ಪಿದ ಭಾರತ ; ಶುಲ್ಕ ರಿಯಾಯ್ತಿ ನೀಡುವಂತೆ ಪಾಕ್ ಗೆ ಮನವಿ

Srinivasamurthy VN

ನವದೆಹಲಿ: ಕರ್ತಾರ್ ಪುರ ಕಾರಿಡಾರ್ ಗೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದಿರುವ ಭಾರತ, ಮಾತುಕತೆಯ ನಂತರವೂ, ಪಾಕಿಸ್ತಾನ ಪ್ರತಿ ಯಾತ್ರಿಕರಿಗೆ ಒಂದು ಬಾರಿಯ ಭೇಟಿಗೆ 20 ಅಮೆರಿಕನ್ ಡಾಲರ್ ಸೇವಾ ಶುಲ್ಕ ವಿಧಿಸಲು ಮುಂದಾಗಿರುವುದು ನಿರಾಶದಾಯಕ ಎಂದಿದೆ. 
  
ಯಾತ್ರಿಕರ ಹಿತಾಸಕ್ತಿಯಿಂದ ಅಂತಹ ಶುಲ್ಕಗಳಿಂದ ವಿನಾಯ್ತಿ ನೀಡಬೇಕು ಎಂದು ಸರ್ಕಾರ ಪಾಕಿಸ್ತಾನದ ಮೇಲೆ ನಿರಂತರ ಒತ್ತಡ ಹೇರುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.  ಆದಾಗ್ಯೂ, 2019ರ ನವೆಂಬರ್ 12ರಂದು ನಡೆಯಲಿರುವ 550ನೇ ಗುರು ನಾನಕ್ ಜನ್ಮ ಶತಮಾನೋತ್ಸವಕ್ಕೆ ಯಾತ್ರಿಕರಿಗೆ ಕರ್ತಾರ್ ಪುರ ತಲುಪಲು ಅವಕಾಶ ಕಲ್ಪಿಸುವ ಸಲುವಾಗಿ, ಕಾರಿಡಾರ್ ಕಾರ್ಯಾಚರಣೆಗೊಳಿಸಲು ಯಾವುದೇ ರೀತಿಯ ಒಪ್ಪಂದಕ್ಕೆ ಸಿದ್ಧವಿರುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ಹೇಳಿಕೆ ಸ್ಪಷ್ಟಪಡಿಸಿದೆ. 
  
ಭಾರತ ಅಕ್ಟೋಬರ್ 23ರಂದು ಕರ್ತಾರ್ ಪುರ ಸಾಹಿಬ್ ಕಾರಿಡಾರ್ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಸರ್ಕಾರ ಸೋಮವಾರ ತಿಳಿಸಿದೆ. ಆದರೆ, ಈ ಒಪ್ಪಂದಕ್ಕೆ ಸಹಿ ಹಾಕುವ ಬೆನ್ನಲ್ಲೇ ಯಾತ್ರಿಕರಿಗೆ ಶುಲ್ಕ ರಿಯಾಯ್ತಿ ನೀಡುವಂತೆ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದಿದೆ. ಮುಂದಿನ ದಿನಗಳಲ್ಲಿ ಒಪ್ಪಂದದಲ್ಲಿ ಬದಲಾವಣೆ ತರಲು ಭಾರತ ಸಿದ್ಧವಿರಲಿದೆ ಎಂದಿದೆ.

SCROLL FOR NEXT