ದೇಶ

ಇದೇ ಮೊದಲು, ಲಾತೂರ್ ಗ್ರಾಮೀಣ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದ ನೋಟಾ!

Lingaraj Badiger

ಮುಂಬೈ: ಗುರುವಾರ ಪ್ರಕಟವಾದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದ್ದು, ಇದೇ ಮೊದಲ ಬಾರಿಗೆ ಲಾತೂರ್ ಗ್ರಾಮೀಣ ಕ್ಷೇತ್ರದಲ್ಲಿ ನೋಟಾ ಎರಡನೇ ಸ್ಥಾನ ಪಡೆದಿದೆ. ಇಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಪ್ರತಿಸ್ಪರ್ಧಿ ಶಿವಸೇನಾ ಅಭ್ಯರ್ಥಿ ನೋಟಾಗಿಂತಲೂ ಕಡಿಮೆ ಮತ ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿದ್ದಾರೆ.

ಲಾತೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಅವರ ಮಗ ಧೀರಜ್ ದೇಶಮುಖ್ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ  ಗೆಲುವು ಸಾಧಿಸಿದ್ದಾರೆ. 

ಧೀರಜ್ ದೇಶಮುಖ್ ಅವರು ಒಟ್ಟು 1,34, 615 ಮತಗಳನ್ನು ಪಡೆದಿದ್ದು, ನೋಟಾ 27, 449 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಪ್ರತಿಸ್ಪರ್ಧಿ ಶಿವಸೇನೆ ಅಭ್ಯರ್ಥಿ ಕೇವಲ 13,459 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ವಿಶೇಷ ಎಂದರೆ, ಶಿವಸೇನೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಜನರು ನೋಟಾಗೆ ಕೊಟ್ಟಷ್ಟು ಮತಗಳನ್ನು ಮೈತ್ರಿಗೆ ಕೊಟ್ಟಿಲ್ಲ. ಇಷ್ಟೊಂದು ಪ್ರಮಾಣದ ಮತ ನೋಟಾಗೆ ಚಲಾವಣೆಯಾಗಿರುವುದು ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ.

ಧೀರಜ್ ಎದುರು ಶಿವಸೇನೆಯಿಂದ ಸ್ಪರ್ಧಿಸಿದ್ದ ಸಚಿನ್ ಅಲಿಯಾಸ್ ರವಿ ರಾಮರಾಜೆ ದೇಶಮುಖ್ 13,113 ಮತಗಳನ್ನು ಪಡೆದಿದ್ದಾರೆ. ಹಾಗೆಯೇ, ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಸ್ಪರ್ಧೆ ಮಾಡಿದ್ದ ಅರ್ಜುನ್ ಧೋನ್ದಿರನ್​ ವಾಘ್ಹಾಮಾರೆ ಅವರು 2847 ಮತಗಳು, ಬಿಎಸ್​ಪಿಯ ಖಾನ್ದೆರೊ ಲಿಂಬಾಜಿ ಭೋಜ್​ರಾಜ್ 778, ಬಹುಜನ ಮುಕ್ತಿ ಪಕ್ಷದ ಜಲಿಲ್ ಯಾಸಿನ್ ಅತಾರ್ 627 ಮತಗಳನ್ನು ಪಡೆದಿದ್ದಾರೆ. ಉಳಿದಂತೆ ಆರು ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಲ್ಕು ಅಂಕಿಯನ್ನೂ ದಾಟಿಲ್ಲ.

SCROLL FOR NEXT