ದೇಶ

ಆದಿತ್ಯ ಠಾಕ್ರೆಯನ್ನು `ಭವಿಷ್ಯದ ಮುಖ್ಯಮಂತ್ರಿ’ ಎಂದು ಬಿಂಬಿಸಿ: ಬಿಜೆಪಿಗೆ ಶಿವಸೇನೆ ಒತ್ತಾಯ

Lingaraj Badiger

ನವದೆಹಲಿ: ಮಹಾರಾಷ್ಟ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ ಮೈತ್ರಿಗೆ ಬಹುಮತ ದೊರಕಿದ್ದು, ಇದೀಗ ಉಭಯ ಪಕ್ಷಗಳ ನಡುವೆ ಅಧಿಕಾರ ಹಂಚಿಕೆ ಲೆಕ್ಕಾಚಾರ ಜೋರಾಗಿದೆ.

ಬಿಜೆಪಿಯ ಬಹುಕಾಲದ ಮಿತ್ರಪಕ್ಷ ಮತ್ತು ಮಹಾರಾಷ್ಟ್ರದ ಪ್ರಮುಖ ಪಾಲುದಾರ ಶಿವಸೇನೆ ತನ್ನ ೫೦:೫೦ ಸೂತ್ರವನ್ನು ಬಿಜೆಪಿ ಮೇಲೆ ಹೇರುತ್ತಿದೆ. ಅಲ್ಲದೆ ಆದಿತ್ಯ ಠಾಕ್ರೆ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಎಂದು ಶ್ಲಾಘಿಸಿ ಶುಕ್ರವಾರ ಪೋಸ್ಟರ್ ಹಾಕಿದೆ.

ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಗುರುವಾರ ತನ್ನ ದೀರ್ಘಕಾಲದ ಪಾಲುದಾರ ಬಿಜೆಪಿಯೊಂದಿಗೆ ಎಲ್ಲವೂ ಸರಿಯಾಗಿಲ್ಲ ಎಂಬ ಸುಳಿವು ನೀಡಿದ್ದಾರೆ.

"ಲೋಕಸಭಾ ಚುನಾವಣೆಯ ಸಮಯದಲ್ಲಿ ನಾವು ಸ್ಥಳಾವಕಾಶ ಕಲ್ಪಿಸಿದ್ದೇವೆ. ಆದರೆ ಅದನ್ನೇ ಮುಂದುವರಿಸಲು ಸಾಧ್ಯವಿಲ್ಲ ನಮ್ಮ ಪಕ್ಷದ ಅಭಿವೃದ್ಧಿಯ ಬಗ್ಗೆ ಖಚಿತಿಪಡಿಸಿಕೊಳ್ಳಬೇಕಿದೆ ಎಂದು ಉದ್ಧವ್ ಠಾಕ್ರೆ ಕಡ್ಡಿಮುರಿದಂತೆ ಹೆಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ಪಕ್ಷದ ಮುಖವಾಣಿ 'ಸಾಮ್ನಾ' ತನ್ನ ಸಂಪಾದಕೀಯದಲ್ಲಿ, ಅಧಿಕಾರ ಹೊಂದಿರುವ ಪಕ್ಷ ದುರಹಂಕಾರ ಪ್ರದರ್ಶಿಸದಂತೆ ಎಂದು ಎಚ್ಚರಿಕೆ ನೀಡಲು ಪ್ರಯತ್ನಿಸಿದೆ.

ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕಡಿಮೆ ಮೊತ್ತದೊಂದಿಗೆ ಮತ್ತೆ ಬಿಜೆಪಿ -ಶಿವಸೇನೆ ಅಧಿಕಾರಕ್ಕೆ ಮರಳಿದೆ.  ಪಕ್ಷಾಂತರ ಮತ್ತು ವಿರೋಧ ಪಕ್ಷಗಳನ್ನು ವಿಭಜಿಸುವ ಮೂಲಕ ಚುನಾವಣೆಗಳನ್ನು ಗೆಲ್ಲಬಹುದು ಎಂಬ ಅಭಿಪ್ರಾಯವನ್ನು ಜನಾದೇಶ ತಿರಸ್ಕರಿಸಿದೆ ಎಂದು 'ಸಾಮ್ನಾ' ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ಚುನಾವಣೆಗೂ ಮುನ್ನ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಭವಿಷ್ಯವಿದೆಯೇ ಎಂಬ ಪ್ರಶ್ನೆ ಕೇಳಿ ಬಂದಿತ್ತು.  ಆದರೆ  ೫೦ ಸ್ಥಾನಗಳನ್ನು ದಾಟುವ ಮೂಲಕ ಪಕ್ಷ ಪುಟಿದೆದ್ದಿದೆ. ಕಾಂಗ್ರೆಸ್ ೪೪ ಸ್ಥಾನಗಳಲ್ಲಿ ಜಯಗಳಿಸಿದೆ. 

"ಈ ಬಾರಿಯ ಫಲಿತಾಂಶ ಅಧಿಕಾರದ ದುರಹಂಕಾರವನ್ನು ತೋರಿಸದಂತೆ ಆಡಳಿತಗಾರರಿಗೆ ನೀಡಿರುವ ಎಚ್ಚರಿಕೆ" ಎಂದು ಸಾಮ್ನಾ ಸಂಪಾದಕೀಯ ತಿಳಿಸಿದೆ. 

ಅಧಿಕಾರ ಹಂಚಿಕೆಯಲ್ಲಿ ಸಮಪಾಲು ಬಯಸುವ ಶಿವಸೇನೆ, ಎರಡೂವರೆ ವರ್ಷಗಳ ನಂತರ ಆದಿತ್ಯ ಠಾಕ್ರೆ ಮುಖ್ಯಮಂತ್ರಿ ಹುದ್ದೆಯನ್ನು ಪಡೆಯುವ ವ್ಯವಸ್ಥೆಗೆ ಒತ್ತಡ ಹೇರುವ ನಿರೀಕ್ಷೆಯಿದೆ.  ಅಥವಾ ಸ್ಪೀಕರ್ ಹುದ್ದೆಯನ್ನು ಕೇಳುವ ಸಾಧ್ಯತೆಯೂ ಇದೆ. 

ಈ ಬಾರಿ ಬಿಜೆಪಿ ೧೦೦ ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಸೇನಾ ೫೭ ಸ್ಥಾನಗಳನ್ನು ಗಳಿಸಿದೆ. ಮುಖ್ಯವಾಗಿ ಬಿಜೆಪಿಗೆ,  ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರೂರು ಮತ್ತು ಬಿಜೆಪಿಯ ಮುಖ್ಯಸ್ಥ ನಿತಿನ್ ಗಡ್ಕರಿ ಅವರ ಸಂಸದೀಯ ಕ್ಷೇತ್ರವಾದ ನಾಗ್ಪುರದಿಂದ ನಿರೀಕ್ಷಿತ ಫಲಿತಾಂಶ ದೊರಕಿಲ್ಲ.

ನಾಗ್ಪುರ ಜಿಲ್ಲೆಯ ೧೨ ಸ್ಥಾನಗಳಲ್ಲಿ ಬಿಜೆಪಿ ಆರು, ಕಾಂಗ್ರೆಸ್ ನಾಲ್ಕು, ಎನ್‌ಸಿಪಿ ಒಂದು ಮತ್ತು ಸ್ಥಾನ ಸ್ವತಂತ್ರ ಅಭ್ಯರ್ಥಿ ಪಾಲಾಗಿದೆ. ನಾಗ್ಪುರ ನಗರ ಮತ್ತು ನಾಗ್ಪುರ ಗ್ರಾಮೀಣ ಜನರು ಕಾಂಗ್ರೆಸ್ ಪಕ್ಷಕ್ಕೆ ಮಣೆ ಹಾಕಿದ್ದಾರೆ.

SCROLL FOR NEXT