ದೇಶ

ಪಾಕ್ ಸೇನೆ, ಸರ್ಕಾರದ ಸಹಾಯದಿಂದ ಕಾಶ್ಮೀರಕ್ಕೆ ಬಂದಿದ್ದೇವೆ: ಬಂಧಿತ ಉಗ್ರರ ತಪ್ಪೊಪ್ಪಿಗೆ

Lingaraj Badiger

ಶ್ರೀನಗರ: ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ಎಸಗಲು ಮತ್ತು ಶಾಂತಿ, ಸುವ್ಯವಸ್ಥೆಯನ್ನು ಕದಡಲು ಪಾಕಿಸ್ತಾನ ವಿಶೇಷವಾಗಿ ಆಗಸ್ಟ್ 5ರ ನಂತರ ಕಣಿವೆಗೆ ಉಗ್ರರನ್ನು ನುಗ್ಗಿಸುತ್ತಿದೆ ಎಂದು ಭಾರತೀಯ ಸೇನೆ ಬುಧವಾರ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ, ಪಾಕಿಸ್ತಾನ ಮೂಲದ, ಲಷ್ಕರ್​ ಎ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರನ್ನು ಬಂಧಿಸಿದೆ.

ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕೆಜೆಎಸ್​ ಧಿಲ್ಲೋನ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಮುನಿರ್ ಖಾನ್ ಅವರು, ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಆಗಸ್ಟ್ 21 ರಂದು ಭಾರತದೊಳಗೆ ನುಗ್ಗಲು ಇವರಿಬ್ಬರೂ ಯತ್ನಿಸಿದ್ದರು. ಆಗ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ. 

ಇವರಿಬ್ಬರನ್ನು ವಿಚಾರಣೆಗೆ ಒಳಪಡಿಸಲಾಯಿತು. ತಾವು ಲಷ್ಕರ್​ ಭಯೋತ್ಪಾದನೆಯ ಸದಸ್ಯರು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ತಾವು ಪಾಕ್​ ನಿವಾಸಿಗಳು ಎಂದು ಅವರು ಖಚಿತಪಡಿಸಿರುವುದಾಗಿ ಹಾಗೂ ಪಾಕ್ ಸರ್ಕಾರ ಮತ್ತು ಸೇನೆಯ ಸಹಾಯದಿಂದ ತಾವು ಕಾಶ್ಮೀರಕ್ಕೆ ಬಂದಿರುವುದಾಗಿ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದರು.

ಕಾಶ್ಮೀರ ಕಣಿವೆಗೆ ಭಯೋತ್ಪಾದಕರನ್ನು ನುಗ್ಗಿಸುವ ಮೂಲಕ ಅಲ್ಲಿನ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಗಡಿಯುದ್ದಕ್ಕೂ ಕಾವಲನ್ನು ಹೆಚ್ಚಿಸಿವೆ ಎಂದರು.

SCROLL FOR NEXT