ದೇಶ

ಚಿನ್ಮಯಾನಂದ್ ಕೇಸ್: ಶಹಜಾನ್ಪುರ್ ವಿದ್ಯಾರ್ಥಿನಿಯನ್ನು ಬೇರೆ ಕಾಲೇಜ್ ಗೆ ವರ್ಗಾಯಿಸಲು ಸುಪ್ರೀಂ ಆದೇಶ

Lingaraj Badiger

ನವದೆಹಲಿ: ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಎಲ್ಎಲ್ಎಂ ವಿದ್ಯಾರ್ಥಿನಿ ಹಾಗೂ ಆಕೆಯ ಸಹದೋರನನ್ನು ಬರೇಲಿ ವಿಶ್ವವಿದ್ಯಾಲಯದ ಇತರೆ ಕಾಲೇಜ್ ಗಳಿಗೆ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್ ಭಾನುಮತಿ ಮತ್ತು ಎಎಸ್ ಬೋಪಣ್ಣ ಅವರು, ನಮಗೆ ಆ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ಹೀಗಾಗಿ ಮೊದಲು ಅವರನ್ನು ಬೇರೆ ಕಾಲೇಜ್ ಗೆ ವರ್ಗಾಯಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದಾರೆ.

ವಿದ್ಯಾರ್ಥಿನಿ ಪ್ರಸ್ತುತ ಉತ್ತರ ಪ್ರದೇಶದ ಶಹಜಾನ್ಪುರ್ ಚಿನ್ಮಯಾನಂದ್ ಆಶ್ರಮಕ್ಕೆ ಸೇರಿದ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂತ ಸಮುದಾಯದ ಹಿರಿಯ ನಾಯಕರೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಳು. ಬಳಿಕ ಆರು ದಿನಗಳ ಕಾಲ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಳು.

ವಿದ್ಯಾರ್ಥಿನಿ ಚಿನ್ಮಯಾನಂದ್ ಅವರ ಹೆಸರನ್ನು ನೇರವಾಗಿ ಹೇಳಿಲ್ಲ. ಆದರೆ ಮಾಜಿ ಕೇಂದ್ರ ಸಚಿವರು ತಮ್ಮ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ತಂದೆ ಆರೋಪಿಸಿದ್ದರು.

ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

SCROLL FOR NEXT