ದೇಶ

ವಾಹನ ಮಾರಾಟ ಕುಸಿಯಲು ಓಲಾ, ಉಬರ್ ಕಾರಣ: ನಿರ್ಮಲಾ ಸೀತಾರಾಮನ್

Lingaraj Badiger

ನವದೆಹಲಿ: ಆಟೋಮೊಬೈಲ್ ವಲಯದಲ್ಲಿ ವಾಹನ ಮಾರಾಟ ಕುಸಿಯಲು ಓಲಾ, ಉಬರ್ ಹಾಗೂ ಮೆಟ್ರೋ ಪ್ರಯಾಣ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೀತಾರಾಮಾನ್ ಅವರು, ಎರಡು ವರ್ಷಗಳ ಹಿಂದೆ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತಮ ಅವಕಾಶ ಇತ್ತು. ಆದರೆ ಈಗ ದೇಶದ ಲಕ್ಷಾಂತರ ಜನರು ತಮ್ಮ ಇಎಂಐ ಉಳಿಸಲು ಓಲಾ ಮತ್ತು ಉಬರ್ ಕಾರುಗಳಲ್ಲಿ ಓಡಾಡುತ್ತಾರೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ಹೇಳಿದ್ದಾರೆ.

ಇಎಂಐ ಭರಿಸುವುದನ್ನು ತಪ್ಪಿಸಲು ಜನ ಓಲಾ, ಉಬರ್’ಗಳಲ್ಲಿ ಓಡಾಡುತ್ತಿದ್ದು, ಹೊಸ ಕಾರುಗಳನ್ನು ಕೊಳ್ಳಲು ಮುಂದೆ ಬರುತ್ತಿಲ್ಲ. ಈ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ಸೀತಾರಾಮನ್ ತಿಳಿಸಿದ್ದಾರೆ. 

ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಅನುಭವಿಸಲು ಹಲವು ಕಾರಣಗಳಿವೆ. ಭಾರತ ಸ್ಟೇಜ್ 6, ನೋಂದಣಿ ಶುಲ್ಕ ಹಾಗೂ ಇಎಂಐ ಕಟ್ಟಿ ವಾಹನ ಕೊಳ್ಳುವುದಕ್ಕಿಂತ ಓಲಾ, ಉಬರ್ ಅಥವಾ ಮೆಟ್ರೋ ಬಳಸುವುದು ಸಹ ಪ್ರಮುಖ ಕಾರಣಗಳಾಗಿವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ ಎಂದರು.

ಲಕ್ಷಾಂತರ ಉದ್ಯೋಗ ಕಡಿತಕ್ಕೂ ಕಾರಣವಾಗಿರುವ ಆಟೋಮೊಬೈಲ್ ಕ್ಷೇತ್ರದ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಕಾರ್ಯನಿರತವಾಗಿದೆ ಎಂದು ಸೀತಾರಾಮನ್ ಅವರು ತಿಳಿಸಿದ್ದಾರೆ.

SCROLL FOR NEXT