ದೇಶ

ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡುವವರ ಸಂಖ್ಯೆ ಹಠಾತ್ ಏರಿಕೆ, ಎಲ್ಲವೂ ಪಿಎಂ ಮೋದಿ ಕೃಪೆ!

Sumana Upadhyaya

ಡೆಹ್ರಾಡೂನ್: ಕಳೆದ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಹೋಗಿ ಅಲ್ಲಿ ಗುಹೆಯೊಳಗೆ ಕುಳಿತು ಸತತ 17 ಗಂಟೆ ಧ್ಯಾನ ಮಾಡಿದ್ದು ವ್ಯಾಪಕ ಸುದ್ದಿಯಾಗಿತ್ತು. ನಂತರ ಈ ಸ್ಥಳ ಇನ್ನಷ್ಟು ಜನಪ್ರಿಯವಾಗಿದ್ದು ಮಾತ್ರವಲ್ಲದೆ ಇಲ್ಲಿಗೆ ಭೇಟಿ ನೀಡಿ ಧ್ಯಾನ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. 


ಉತ್ತರಾಖಂಡದ ಗರ್ವಾಲ್ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗರ್ವಾಲ್ ಮಂಡಲ್ ವಿಕಾಸ್ ನಿಗಮ್(ಜಿಎಂವಿಎನ್) ಅಧಿಕಾರಿಗಳು ಹೇಳುವ ಪ್ರಕಾರ, ಗುಹೆಯಲ್ಲಿ ಧ್ಯಾನ ಮಾಡಲು ಮೊದಲೇ ಟಿಕೆಟ್ ಕಾಯ್ದಿರಿಸಿದವರ ಸಂಖ್ಯೆ ಅಕ್ಟೋಬರ್ ವರೆಗೆ ಭರ್ತಿಯಾಗಿದೆ. ಚಳಿಗಾಲದಲ್ಲಿ ದೇವಸ್ಥಾನದ ಗೇಟ್ ಮುಚ್ಚುವವರೆಗೆ ಗುಹೆಗೆ ಧ್ಯಾನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಬಹುದು ಎನ್ನುತ್ತಾರೆ.


ಪ್ರಧಾನಿ ಮೋದಿಯವರು ಬಂದು ಹೋದ ನಂತರ ಗುಹೆಗೆ ಬಂದು ಧ್ಯಾನದಲ್ಲಿ ತೊಡಗುವವರ ಸಂಖ್ಯೆ ಏರಿಕೆಯಾಯಿತು. ಕಳೆದ ಜೂನ್ ನಿಂದ ಇಲ್ಲಿಯವರೆಗೆ 46 ಮಂದಿ ಬಂದು ಧ್ಯಾನ ಮಾಡಿ ಹೋಗಿದ್ದಾರೆ. ಸದ್ಯ ಹೊಸಬರದ್ದು ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ. ಆತ್ಮಶಾಂತಿ ಬೇಕೆಂದು ಬಯಸುವವರು ಗುಹೆಯೊಳಗೆ ಹೋಗಿ ಕುಳಿತು ಧ್ಯಾನ ಮಾಡುತ್ತಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದರು.


ಗುಹೆಯಲ್ಲಿ ಯಾತ್ರಿಕರಿಗೆ ಬೆಡ್, ತಮ್ಮ ವಸ್ತುಗಳನ್ನು ಬಿಸಿ ಮಾಡಿಕೊಳ್ಳುವ ಸಾಧನ, ಶೌಚಾಲಯ ಮತ್ತು ಇತರ ಮೂಲಭೂತ ವ್ಯವಸ್ಥೆಗಳಿವೆ. ಸಮುದ್ರ ಮಟ್ಟದಿಂದ ಇದು 12 ಸಾವಿರ ಅಡಿ ಎತ್ತರದಲ್ಲಿದ್ದು ದೇವಸ್ಥಾನವನ್ನು ವೀಕ್ಷಿಸಲು ಗುಹೆಯಲ್ಲಿ ಕಿಟಿಕಿಯಿದೆ. ಇಲ್ಲಿ ಒಂದು ದಿನಕ್ಕೆ ತಂಗಲು 990 ರೂಪಾಯಿ ನೀಡಬೇಕು. ರಾತ್ರಿ ತಂಗಲು 1500 ರೂಪಾಯಿ. ಮುಂಚೆ 3 ಸಾವಿರ ರೂಪಾಯಿ ಕೊಡಬೇಕಾಗಿತ್ತು. ಪ್ರಧಾನಿಯವರು ಬಂದು ಹೋದ ಮೇಲೆ ದರ ಕಡಿಮೆಯಾಗಿದೆ ಎಂದು ಇಲ್ಲಿನ ಅಧಿಕಾರಿಗಳು ಹೇಳುತ್ತಾರೆ.

SCROLL FOR NEXT