ದೇಶ

ಆಂಧ್ರಪ್ರದೇಶ: ಪ್ರವಾಸಿಗರ ದೋಣಿ ಪಲ್ಟಿ: 12 ಮಂದಿ ಸಾವು, 14 ಜನರ ರಕ್ಷಣೆ

Raghavendra Adiga

ವಿಜಯವಾಡ: ಪೂರ್ವ ಗೋದಾವರಿ ಜಿಲ್ಲೆಯಲ್ಲಿ ದೋಣಿ ನದಿಯಲ್ಲಿ ಮಗುಚಿ ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. 
ಕನಿಷ್ಠ 50 ಪ್ರವಾಸಿಗರು ಮತ್ತು 11 ಸಿಬ್ಬಂದಿಗಳನ್ನು ಹೊತ್ತ ದೋಣಿಯೊಂದು ನಿನ್ನೆ ಅಪರಾಹ್ನ ನದಿಯಲ್ಲಿ ಹೋಗುತ್ತಿದ್ದ ವೇಳೆ ಗೋದಾವರಿ ನದಿಯಲ್ಲಿ ಮುಳುಗಿ ಈ ದುರ್ಘಟನೆ ನಡೆದಿದೆ. 

ನಾವು ಇಲ್ಲಿಯವರೆಗೆ ಏಳು ಶವಗಳನ್ನು ಗುರುತಿಸಿದ್ದೇವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಂಪಚೋದವರಂ ಎಎಸ್ಪಿ ರಾಹುಲ್ ದೇವ್ ಸಿಂಗ್ ಹೇಳಿದ್ದಾರೆ.

ದೋಣಿಯು ಪ್ರಸಿದ್ದ ಪ್ರವಾಸಿ ಸ್ಥಳ ಪಾಪಿಕೊಂಡಲು ಅಥವಾ ಪಾಪಿ ಹಿಲ್ಸ್ ನತ್ತ ಸಾಗುತ್ತಿತ್ತು. ಇತ್ತೀಚಿನ ವರದಿಯಂತೆ ಹೆಚ್ಚಿನ ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿದ್ದು  14 ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಇನ್ನು ಗೋದಾವರಿ ನದಿಗೆ ಭಾರಿ ಒಳಹರಿವಿರುವ ಕಾರಣ ಪಾಪಿ ಹಿಲ್ಸ್ ಪ್ರದೇಶಕ್ಕೆ ದೋಣಿ ಸೇವೆಗಳನ್ನು ಅಧಿಕಾರಿಗಳು ಸುಮಾರು ಒಂದು ತಿಂಗಳ ಕಾಲ ಸ್ಥಗಿತಗೊಳಿಸಿದ್ದರು. ಆದರೆ ಇದೀಗ ನೀರಿನ ಒಳಹರಿವು ಕಡಿಮೆಯಾಗುತ್ತಿರುವ ಕಾರಣ ಸೇವೆಯನ್ನು ಪುನಾರಂಭಿಸಲಾಗಿತ್ತು. ಪ್ರಸ್ತುತ, ಗೋದಾವರಿ ನದಿಗೆ ಕನಿಷ್ಠ ಐದು ಲಕ್ಷ ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ.

ವರದಿಗಳ ಪ್ರಕಾರ, 50 ಪ್ರವಾಸಿಗರು ಮತ್ತು 11 ಸಿಬ್ಬಂದಿಗಳನ್ನು ಹೊಂದಿರುವ ದೋಣಿ ಗಂಡಿ ಪೋಚಮ್ಮ ದೇವಸ್ಥಾನದಿಂದ ಹೊರಟಿದ್ದು ದೇವಿಪಟ್ಟಣಂ ಮಂಡಲದಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಕಚಲೂರು ಮಂಡ ಗ್ರಾಮದ ಸಮೀಪ ಪಲ್ಟಿಯಾಗಿದೆ. ಕೆಲವು ಪ್ರವಾಸಿಗರು ನೀರಿನ ಇನ್ನೊಂದು ಬದಿಯಲ್ಲಿರುವ ಟುಟುಕುಂಟಾ ಗ್ರಾಮದತ್ತ ಈಜಿ ದಡ ಸೇರಿದ್ದಾರೆ. ಇನ್ನೊಂದೆಡೆ ಗ್ರಾಮಸ್ಥರು 14 ಜನರನ್ನು ರಕ್ಷಿಸಿದ್ದಾರೆ. 

ಸಿಎಂ ಕಛೇರಿ ಸಹ ಪೂರ್ವ ಗೋದಾವರಿ ಜಿಲ್ಲಾಡಳಿತದೊಂದಿಗೆ ಸಂಪರ್ಕ ಹೊಂದಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳನ್ನು ಕೇಳಿದೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲು ರಾಜಮಂಡ್ರಿಯಿಂದ ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಮುರಳೀಧರ್ ರೆಡ್ಡಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನಯೀಮ್ ಅಸ್ಮಿ ದೇವಿಪಟ್ನಂಗೆ ಧಾವಿಸಿದ್ದಾರೆ.

SCROLL FOR NEXT