ದೇಶ

ನಿರ್ಮಾಣ ಹಂತದ ಐಎನ್ಎಸ್ ವಿಕ್ರಾಂತ್ ನೌಕೆಯ ಪ್ರಮುಖ ಉಪಕರಣ ಕಳವು; ತನಿಖೆ ಆರಂಭ

Srinivasamurthy VN

ಕೊಚ್ಚಿ: ನಿರ್ಮಾಣ ಹಂತದ ಐಎನ್ಎಸ್ ವಿಕ್ರಾಂತ್ ನೌಕೆಯ ಪ್ರಮುಖ ಉಪಕರಣ ಕಳವಾಗಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಮೂಲಗಳ ಪ್ರಕಾರ ಕೇರಳದ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಐಎನ್ಎಸ್ ವಿಕ್ರಾಂತ್ ನೌಕೆ ತಯಾರಾಗುತ್ತಿದ್ದು, ಇಲ್ಲಿಯೇ ವಿಮಾನ ವಾಹಕ ನೌಕೆಯ ಶಸ್ತ್ರಾಸ್ತ್ರ ವ್ಯವಸ್ಥೆಯಲ್ಲಿನ ಎಲೆಕ್ಟ್ರಾನಿಕ್ ಡಿಜಿಟಲ್ ಉಪಕರಣವೊಂದನ್ನು ಕಳವು ಮಾಡಲಾಗಿದೆ. ಈ ಮೂಲಕ ಗಂಭೀರ ಭದ್ರತಾ ಲೋಪವಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಮತ್ತು ಪೊಲೀಸರು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ.

ಐಎನ್ಎಸ್ ವಿಕ್ರಾಂತ್ ವಿಮಾನವಾಹಕ ನೌಕೆ ತಯಾರಾಗುತ್ತಿರುವ ಕೊಚ್ಚಿನ್ ಶಿಪ್ ಯಾರ್ಡ್ ಗೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದೆ. ಅಭೇಧ್ಯ ಕೋಟೆಯಾಗಿರುವ ಇಲ್ಲಿಗೆ ಹೊರಗಿನವರು ಬಂದು ಉಪಕರಣ ಕಳವು ಮಾಡಲು ಸಾಧ್ಯವೇ ಇಲ್ಲ. ಇದು ಒಳಗಿನವರ ಕೆಲಸವೇ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ಆರಂಭಿಸಲಾಗಿದೆ. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಹೇಳಿದ್ದಾರೆ.

ಆಗಸ್ಟ್ 28ರವರೆಗೂ ನೌಕೆಯಲ್ಲಿ ಆ ಉಪಕರಣವಿತ್ತು. ಆದರೆ ಆ ಬಳಿಕವೇ ಅದು ನಾಪತ್ತೆಯಾಗಿದೆ ಎಂದು ಶಿಪ್ ಯಾರ್ಡ್ ಕಾರ್ಯದರ್ಶಿ ವಿ ಕಲಾ ಅವರು ಹೇಳಿದ್ದಾರೆ. ಅಲ್ಲದೆ ಈ ಕುರಿತಂತೆ ತಾವು ಪೊಲೀಸರಿಗೆ ಅಧಿಕೃತ ದೂರು ಕೂಡ ನೀಡಿದ್ದೇವೆ. ಶಿಪ್ ಯಾರ್ಡ್ ಗೆ ಸಿಐಎಸ್ಎಫ್ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹಾಗಿದ್ದೂ ಕಳ್ಳತನವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಪೊಲೀಸರ ತನಿಖೆ ಮೇಲೆ ತಮಗೆ ನಂಬಿಕೆ ಎಂದು ಎಂದು ಕಲಾ ಅವರು ಹೇಳಿದ್ದಾರೆ.

SCROLL FOR NEXT