ಅನರ್ಹ ಶಾಸಕರು 
ದೇಶ

17 ಅನರ್ಹ ಶಾಸಕರ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್

ಮುಂದಿನ ರಾಜಕೀಯ ಭವಿಷ್ಯದ ಚಿಂತೆಯಲ್ಲಿರುವ 17 ಅನರ್ಹ ಶಾಸಕರು ಸ್ಪೀಕರ್‌ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಗುರುವಾರಕ್ಕೆ ಮುಂದೂಡಿದೆ.

ನವದೆಹಲಿ: ಮುಂದಿನ ರಾಜಕೀಯ ಭವಿಷ್ಯದ ಚಿಂತೆಯಲ್ಲಿರುವ 17 ಅನರ್ಹ ಶಾಸಕರು ಸ್ಪೀಕರ್‌ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಗುರುವಾರಕ್ಕೆ ಮುಂದೂಡಿದೆ.

ಸತತ ಐದು ಗಂಟೆಗಳ ಕಾಲ ಅನರ್ಹರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಯನ್ನು ನಾಳೆಗ ಬೆಳಿಗ್ಗೆ 10.30 ಕ್ಕೆ ಮುಂದೂಡಿದೆ.

ಇಂದು ಬೆಳಗ್ಗೆ ಕೋರ್ಟ್‌ ಹಾಲ್‌ ಸಂಖ್ಯೆ 3 ರಲ್ಲಿ ತ್ರಿಸದಸ್ಯ ಪೀಠ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ಅನರ್ಹರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟಗಿ, ಅನರ್ಹರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು, ಸೆ 30 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಇವರೆಲ್ಲ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಎಂಟು ವಾರಗಳು ಕಳೆದಿವೆ. ಹೀಗಾಗಿ ತುರ್ತಾಗಿ ಅರ್ಜಿಯನ್ನು ಇತ್ಯರ್ಥ ಪಡಿಸುವಂತೆಯೂ ಹಾಗೂ ಚುನಾವಣಾ ಅಧಿಸೂಚನೆಗೆ ತಡೆ ನೀಡುವಂತೆ ತ್ರಿಸದಸ್ಯ ಪೀಠಕ್ಕೆ  ಮನವಿ ಮಾಡಿದರು.

ಸ್ಪೀಕರ್‌, ಶಾಸಕರ ವಿಚಾರದಲ್ಲಿ ಸಾಮಾಜಿಕ ನ್ಯಾಯವನ್ನು ಅನುಸರಿಸಿಲ್ಲ. ಶಾಸಕರ ರಾಜೀನಾಮೆ ಅಂಗೀಕಾರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮೊದಲು ಅವರು ಹೇಳಬೇಕಿತ್ತು. ಆದರೆ ರಾಜೀನಾಮೆ ವಿಚಾರವನ್ನು ಮೊದಲು ಇತ್ಯರ್ಥ ಪಡಿಸದೇ ಏಕಾಏಕಿ ಶಾಸಕರ ಸದಸ್ಯತ್ವ ರದ್ದುಗೊಳಿಸಿದ್ದಾರೆ. ನ್ಯಾಯಾಲಯ ವಿನಾಯಿತಿ ನೀಡಿದ್ದರಿಂದ ಶಾಸಕರು ಸದನಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಇದು ವಿಪ್‌ ಉಲ್ಲಂಘನೆಯಾಗುವುದಿಲ್ಲ ಎಂದು ವಾದ ಮಂಡಿಸಿದರು.

ಇವರ ಮೇಲೆ ಪಕ್ಷ ವಿರೋಧಿ ಚಟುವಟಿಕೆ ಆರೋಪ ಹೊರಿಸುವುದು ಸರಿಯಲ್ಲ. ಅಪರೂಪದ ಪ್ರಕರಣಗಳಲ್ಲಿ ಚುನಾವಣೆಗೆ ತಡೆ ನೀಡಲಾಗಿದೆ. 2015ರಲ್ಲಿ ಹೈದರಾಬಾದ್‌ ಉಚ್ಚ ನ್ಯಾಯಾಲಯ ತಡೆ ನೀಡಿತ್ತು.  ಸಂವಿಧಾನದ 361/ಬಿ ವಿಧಿ ಪ್ರಕಾರ ಅನರ್ಹ ಶಾಸಕರು ಲಾಭದಾಯಕ ಹುದ್ದೆ ಹೊಂದುವಂತಿಲ್ಲ. ಇದರಲ್ಲಿ ಪಕ್ಷಾಂತರದ ಬಗ್ಗೆ ಉಲ್ಲೇಖಿಸಿಲ್ಲ. ಅನರ್ಹತೆ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇರುವಂತಹ ಸಂದರ್ಭದಲ್ಲಿಯೇ ಚುನಾವಣೆ ಘೋಷಣೆಯಾಗಿದೆ. ಸ್ಪೀಕರ್‌ 2023ರವರೆಗೆ ಸ್ಪರ್ಧಿಸುವಂತಿಲ್ಲ ಎಂದಿರುವುದರಿಂದ ಉಪಚುನಾವಣೆಗೆ ತಡೆ ನೀಡಬೇಕು ಎಂದು ಪೀಠಕ್ಕೆ ರೋಹಟಗಿ ಮನವಿ ಮಾಡಿದರು.

ಸುಮಾರು ಒಂದೂವರೆ ತಾಸಿಗೂ ಹೆಚ್ಚು ಕಾಲ ಅನರ್ಹ ಶಾಸಕರ ಪರ ವಾದ ಮಂಡಿಸಿದ ಮುಕುಲ್‌ ರೋಹಟಗಿ, ಸಂಸದ ಉಮೇಶ ಜಾಧವ್‌ ರಾಜೀನಾಮೆ ವಿಚಾರವನ್ನು ಉಲ್ಲೇಖಿಸಿದರು. ಜಾಧವ್‌ ಅವರ ರಾಜೀನಾಮೆ ಸ್ವೀಕರಿಸಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಪೀಕರ್‌ ಆಗಿದ್ದ ರಮೇಶ್‌ ಕುಮಾರ್‌ ಅನುಕೂಲ ಮಾಡಿಕೊಟ್ಟಿದ್ದಾರೆ. ಆದರೆ ಈ ಶಾಸಕರ ವಿಚಾರದಲ್ಲಿ ಮಾತ್ರ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಉಳಿಸುವ ಪ್ರಯತ್ನವನ್ನು ಸ್ಪೀಕರ್‌ ಮೊದಲು ಮಾಡಿದ್ದರು. ರಾಜೀನಾಮೆ ಹಿಂಪಡೆಯಲು ಶಾಸಕರ ಮೇಲೆ ಅನರ್ಹತೆಯ ಅಸ್ತ್ರ ಪ್ರಯೋಗಿಸಲಾಗಿದೆ. ಶಾಸಕರು ಮುಂಬೈಗೆ ವಿಶೇಷ ವಿಮಾನದಲ್ಲಿ ಹೋಗಿದ್ದರು ಎನ್ನಲು ಇವರಿಗೆ ಯಾವುದೇ ಹಕ್ಕು ಇಲ್ಲ. ಸರ್ಕಾರದ ಬಗ್ಗೆ ಸದನದಲ್ಲಿ ತೀರ್ಮಾನವಾಗಬೇಕೇ ಹೊರತು ಸ್ಪೀಕರ್‌ ಇದರಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ಆದರೆ ರಮೇಶ ಕುಮಾರ್‌ ನಿಯಮವನ್ನು ಮೀರಿ ಹದಿನೇಳು ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ ಎಂದು ದೂರಿದರು.

ಅನರ್ಹ ಶಾಸಕ ಸುಧಾಕರ್‌ ಪರ ವಕೀಲ ಸುಂದರಂ ವಾದ ಮಂಡಿಸಿ, ತಮ್ಮ ಕಕ್ಷಿದಾರರು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಇತರೆ ಪಕ್ಷದ ಜೊತೆಗಾಗಲೀ ಗುರುತಿಸಿಕೊಂಡಿಲ್ಲ. ಆ ಸರ್ಕಾರದ ನಡೆಯಿಂದ ಬೇಸತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆಯನ್ನು ನೀಡಿರಲಿಲ್ಲ. ಸಂವಿಧಾನದ ಪ್ರಕಾರವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸುಧಾಕರ್‌ ಚುನಾವಣೆಗೆ ಸ್ಪರ್ಧೆ ಬಯಸಿದ್ದು, ಇದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತ್ರಿಸದಸ್ಯ ಪೀಠಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ಇಬ್ಬರು ವಕೀಲರ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಕೃಷ್ಣ ಮುರಳಿ, ಸಂಜಯ್ ಖನ್ನಾ ಕೆಲಕಾಲ ಪರಸ್ಪರ ಚರ್ಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ಪೀಠ ಮಧ್ಯಾಹ್ನ ಮತ್ತೆ  ವಿಚಾರಣೆ ಕೈಗೆತ್ತಿಕೊಂಡಾಗ ರಾಣೆಬೆನ್ನೂರು ಅನರ್ಹ ಶಾಸಕ ಆರ್.ಶಂಕರ್ ಹಾಗೂ ಸೀಮಂತ್ ಪಾಟೀಲ್ ಪರ ವಕೀಲ ವಿ.ಗಿರಿ ವಾದ ಮಂಡನೆಗೆ ಮುಂದಾದರು. ತಮ್ಮ ಕಕ್ಷಿದಾರರಾದ ಆರ್.ಶಂಕರ್ ಅವರ ಕೆಪಿಜೆಪಿ ಕಾಂಗ್ರೆಸ್ ನಲ್ಲಿ ವಿಲೀನಗೊಂಡೇ ಇಲ್ಲ,  ಅವರು ಸ್ವತಂತ್ರ ಅಭ್ಯರ್ಥಿ .ಕೆಪಿಜೆಪಿ ಕಾಂಗ್ರೆಸ್ ಜೊತೆ ವಿಲೀನಗೊಳಿಸಲು ಮುಂದಾಗಿದ್ದರಾದರೂ ಅದು ಸಾಧ್ಯವಾಗಿಲ್ಲ. ಆರ್.ಶಂಕರ್ ಮೈತ್ರಿ ಸರ್ಕಾರದ ಶಾಸಕರಲ್ಲ‌. ಸ್ವತಂತ್ರ ಶಾಸಕರು, ಹೀಗಾಗಿ ಅವರನ್ನು ಕಾಂಗ್ರೆಸ್ ಉಚ್ಛಾಟಿಸಲು ಬರುವುದಿಲ್ಲ‌, ವಿಪ್ ಅನ್ವಯವಾಗುವುದಿಲ್ಲ. ಸೀಮಂತ್ ಪಾಟೀಲ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು,  ಹೀಗಾಗಿ ಸದನಕ್ಕೆ ಬರಲಿಲ್ಲ. ಸೀಮಂತ್ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೇ ಇಲ್ಲ. ಅನಾರೋಗ್ಯದ ಕಾರಣವಿದ್ದಾಗ ಸದನಕ್ಕೆ ಗೈರಾಗಬಹುದು ಎಂದು ಸಂವಿಧಾನದಲ್ಲಿಯೇ ಹೇಳಿದೆ. ಅಂದ ಮೇಲೆ ಅವರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಸರಿಯಲ್ಲ. ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಿದರು.

ಕೇವಲ ಒಬ್ಬ ವ್ಯಕ್ತಿ ವಿಲೀನಗೊಂಡರೆ ಸಾಲದು. ಇಡೀ ಪಕ್ಷವೇ ಕಾಂಗ್ರೆಸ್ ಜೊತೆ ವಿಲೀನಗೊಳ್ಳಬೇಕಾಗುತ್ತದೆ. ಆದ್ದರಿಂದ ಶಂಕರ್ ಕೆಪಿಜೆಪಿ ಕಾಂಗ್ರೆಸ್ ವಿಲೀನ ಅಪೂರ್ಣ. ಹೀಗೆಂದು ಸ್ಪೀಕರ್ ರಮೇಶ್ ಕುಮಾರ್ ಅವರೇ ಹೇಳಿದ್ದಾರೆ ಎಂದು ನ್ಯಾಯಮೂರ್ತಿಗಳ ಮುಂದೆ ತಮ್ಮ ವಾದ ಮಂಡಿಸಿದರು. ಹೀಗಾಗಿ ಕಾಂಗ್ರೆಸ್ ವಿಪ್ ಶಂಕರ್ ಗೆ ಅನ್ವಯಿಸುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿರುವುದರಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು, ಇಲ್ಲವೇ ಚುನಾವಣೆಗೆ ತಡೆ ನೀಡಬೇಕು ಎಂದು ಕಕ್ಷಿದಾರರ ಪರ ವಿ.ಗಿರಿ ಮನವಿ ಮಾಡಿದರು.

ಚುನಾವಣೆ ಸ್ಪರ್ಧೆಗೆ ಅವಕಾಶ ಕೊಡಿ ಇಲ್ಲವೇ ಚುನಾವಣೆ ಮುಂದೂಡುವಂತೆ ವಿ.ಗಿರಿ ವಾದ ಮಂಡಿಸಿದಾಗ, ಕೆಪಿಜೆಪಿ-ಕಾಂಗ್ರೆಸ್ ವಿಲೀನದ ಬಗ್ಗೆ ಸ್ಪೀಕರ್  ಆದೇಶದ ಪ್ರತಿ ಹಾಜರುಪಡಿಸುವಂತೆ ಕೇಳಿದಾಗ ಸ್ಪೀಕರ್ ಪರ ವಕೀಲರು ಆದೇಶದ ಪ್ರತಿ ಇಲ್ಲ ಎಂದರು.

ಜೆಡಿಎಸ್‌ ಅನರ್ಹ ಶಾಸಕರ ಪರ ವಕೀಲ ವಿಶ್ವನಾಥನ್‌ ವಾದ ಮಂಡಿಸಿ, ಚುನಾವಣೆ ಮುಂದೂಡುವಂತೆ ಮನವಿ ಮಾಡಿದರು. ಲಿಖಿತ ರೂಪದಲ್ಲಿ ನಾಳೆ ಪ್ರತಿವಾದ ಮಂಡಿಸುವುದಾಗಿ ಕೆಪಿಸಿಸಿ ಪರ ವಕೀಲ ದೇವದತ್ತ ಕಾಮತ್‌ ನ್ಯಾಯಾಲಯಕ್ಕೆ ತಿಳಿಸಿದರು.
ಸುದೀರ್ಘ ವಾದವನ್ನು ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT