ದೇಶ

ನಾರದ ಸ್ಟಿಂಗ್ ಕೇಸ್: ಸಿಬಿಐನಿಂದ ಐಪಿಎಸ್‌ ಅಧಿಕಾರಿ ಎಸ್‌ಎಂಎಚ್‌ ಮಿರ್ಜಾ ಬಂಧನ

Lingaraj Badiger

ಕೊಲ್ಕತಾ: 2016ರ ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್‌ ಅಧಿಕಾರಿ ಎಸ್‌ಎಂಎಚ್‌ ಮಿರ್ಜಾ ಅವರನ್ನು ಗುರುವಾರ ಸಿಬಿಐ ಬಂಧಿಸಿದ್ದು, ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದ ಮೊದಲ ಬಂಧನ ಇದಾಗಿದೆ.

ಪಶ್ಚಿಮ ಬಂಗಾಳದಲ್ಲಿ 2016ರ ವಿಧಾನಸಭೆ ಚುನಾವಣೆಗೂ ಮುನ್ನ ಸ್ಟಿಂಗ್ ಆಪರೇಷನ್ ಬಹಿರಂಗಗೊಂಡಾಗ ಮಿರ್ಜಾ ಅವರು ಬುರ್ದ್ವಾನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಮಿರ್ಜಾ ಅವರು ಉದ್ಯಮಿಯೊಬ್ಬರಿಂದ ಹಣ ಸ್ವೀಕರಿಸುತ್ತಿರುವುದು ಸ್ಟಿಂಗ್ ಆಪರೇಷನ್ ನಿಂದ ಬಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಿರ್ಜಾ ಅವರನ್ನು ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ. ಇತ್ತೀಚಿಗಷ್ಟೇ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಮತ್ತೆ ಸಮನ್ಸ್ ಜಾರಿ ಮಾಡಿತ್ತು. ಇಂದು ಆರೋಪಿ ಐಪಿಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ.

ನಾರದ ಸುದ್ದಿ ಸಂಸ್ಥೆಯ ಸಿಇಒ ಮ್ಯಾಥ್ಯು ಸ್ಯಾಮುವೆಲ್ಸ್ ಅವರು ಸ್ಟಿಂಗ್ ಆಪರೇಷನ್ ನ ವಿಡಿಯೋವನ್ನು ಸಿಬಿಐಗೆ ನೀಡಿದ್ದು, ಸಿಬಿಐ ಟಿಎಂಸಿ ಹಲವು ಸಂಸದರು, ಸಚಿವರು ಹಾಗೂ ಮುಖಂಡರ ಧ್ವನಿ ಮಾದರಿಯನ್ನು ಸಂಗ್ರಹಿಸಿತ್ತು. 

ಶಾರದಾ ಚಿಟ್‌ ಫಂಡ್‌ ಹಗರಣದ ಜೊತೆಗೆ ನಾರದ ಸ್ಟಿಂಗ್‌ ಆಪರೇಷನ್‌ನ ಆರೋಪಿಗಳಿಗೂ ಸಿಬಿಐ ಬಲೆ ಬೀಸಿದ್ದು, ಅದರಲ್ಲಿ ಸಚಿವರು, ಸಂಸದರು, ಶಾಸಕರು ಸೇರಿದಂತೆ 12 ರಾಜಕಾರಣಿಗಳು ಆರೋಪಿಗಳಾಗಿದ್ದಾರೆ. ಆಡಳಿತ ರೂಢ ಟಿಎಂಸಿಯ ಈ ನಾಯಕರು ಮತ್ತು ಐಪಿಎಸ್‌ ಅಧಿಕಾರಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.

ಏನಿದು 'ನಾರದಾ ಸ್ಟಿಂಗ್'?
ನಾರದಾ ಎನ್ನುವ ಸುದ್ದಿ ವಾಹಿನಿ ಈ ಸ್ಟಿಂಗ್ ಆಪರೇಷನ್ ನಡೆಸಿತ್ತು. 2016 ಪಶ್ಚಿಮ ಬಂಗಾಳ ಚುನಾವಣೆಗೂ ಮುನ್ನ ಈ ಸ್ಟಿಂಗ್ ಆಪರೇಷನ್ ನಡೆಸಿ ಹಲವು ಚಾನಲ್ ಗಳಲ್ಲಿ ಪ್ರಸಾರವಾಗಿತ್ತು. ಈ ಕುಟುಕು ಕಾರ್ಯಾಚರಣೆಯಲ್ಲಿ 13 ಟಿಎಂಸಿ ನಾಯಕರು ಲಂಚ ತೆಗೆದುಕೊಳ್ಳುವ ದೃಶ್ಯಗಳಿದ್ದವು. ನಾರದಾ ಚಾನಲ್ ಖೊಟ್ಟಿ ಕಂಪೆನಿಯೊಂದನ್ನು ಸೃಷ್ಟಿಸಿ ಈ ನಾಯಕರ ಬಳಿ ಸಹಾಯ ಕೇಳುವ ನೆಪದಲ್ಲಿ ಹೋಗಿದ್ದರು. ನಂತರ ಲಂಚ ನೀಡಿದ್ದರು. ಇವೆಲ್ಲಾ ವಿಡಿಯೋದಲ್ಲಿ ದಾಖಲಾಗಿತ್ತು. ಕೊಲ್ಕೊತ್ತಾ ಹೈಕೋರ್ಟ್ ಮಾರ್ಚ್ 17, 2017ರಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು. ತನಿಖೆಗೆ ತಡೆ ನೀಡುವಂತೆ ಕೋರಿ ಪಶ್ಚಿಮ ಬಂಗಾಳ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಯಿತಾದರೂ ಅರ್ಜಿ ತಿರಸ್ಕರಿಸಿದ್ದರಿಂದ ತನಿಖೆ ಮುಂದುವರಿದಿದೆ.

SCROLL FOR NEXT