ದೇಶ

ಭಾರತದಲ್ಲಿ 'ಕೊರೋನಾ'ಗೆ ಮೃತಪಟ್ಟವರ ಸಂಖ್ಯೆ ಇಂದು 109ಕ್ಕೆ ಏರಿಕೆ: 4 ಸಾವಿರ ದಾಟಿದ ಸೋಂಕಿತರು

Sumana Upadhyaya

ನವದೆಹಲಿ: ಮಹಾಮಾರಿ ಕೊರೋನಾಗೆ ಬಲಿಯಾದವರ ಸಂಖ್ಯೆ ಭಾರತದಲ್ಲಿ ಸೋಮವಾರ 109ಕ್ಕೇರಿದೆ.ಸೋಂಕಿತರ ಸಂಖ್ಯೆ 4 ಸಾವಿರದ 67ಕ್ಕೇರಿದ್ದು ಕಳೆದ 24 ಗಂಟೆಗಳಲ್ಲಿ 505 ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 12 ಗಂಟೆಗಳಲ್ಲಿ ದೇಶದಲ್ಲಿ ಹೊಸ 490 ಪ್ರಕರಣಗಳು ವರದಿಯಾಗಿದ್ದು ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 4 ಸಾವಿರದ 67ಕ್ಕೇರಿದೆ. ದೇಶದಲ್ಲಿ 3 ಸಾವಿರದ 666 ಸೋಂಕಿತ ಕೇಸುಗಳು ಇದ್ದು 292 ಮಂದಿಯಲ್ಲಿ ಕೆಲವರು ಗುಣಮುಖರಾಗಿದ್ದರೆ ಇನ್ನು ಕೆಲವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಓರ್ವ ವ್ಯಕ್ತಿ ವಲಸೆ ಹೋಗಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 151 ಪ್ರಕರಣಗಳು ಬೆಳಕಿಗೆ ಬಂದಿದೆ. 11 ಮಂದಿ ಗುಣಮುಖರಾಗಿದ್ದು, 4 ಸಾವು ದಾಖಲಾಗಿದೆ. ಸದ್ಯ 136 ಪ್ರಕರಣಗಳು ಚಾಲ್ತಿಯಲ್ಲಿದೆ.

ಜಾರ್ಖಂಡ್ ನ ರಾಂಚಿಯಲ್ಲಿ ಮತ್ತೊಂದು ಕೊರೋನಾ ಸೋಂಕಿತ ಪ್ರಕರಣ ವರದಿಯಾಗಿದೆ. ಅವರು ಮಲೇಷಿಯಾದ ಸೋಂಕಿತ ಮಹಿಳೆ ಜೊತೆ ನೇರ ಸಂಪರ್ಕದಲ್ಲಿದ್ದರು. ಜಾರ್ಖಂಡ್ ನಲ್ಲಿ ಒಟ್ಟು ನಾಲ್ಕು ಕೊರೋನಾ ಸೋಂಕಿತ ಕೇಸುಗಳು ವರದಿಯಾಗಿವೆ. ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಕೊರೋನಾ ಪ್ರಕರಣಗಳು ವರದಿಯಾಗಿಲ್ಲ. ಬಿಹಾರದ ಮೊದಲ ಕೊರೋನಾ ರೋಗಿ ಅನಿತಾ ವಿನೋದ್ ಪ್ರತಿಕೂಲ ಪರಿಸ್ಥಿತಿ ಜೀವನದಲ್ಲಿ ಸಕಾರಾತ್ಮಕವಾಗಿ ಯೋಚಿಸಲು ಕಲಿಸಿದೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ 33 ಹೊಸ ಪ್ರಕರಣಗಳು: ಮಹಾರಾಷ್ಟ್ರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು ಇಂದು 33 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲಿ ಸೋಂಕಿತರ ಸಂಖ್ಯೆ 690ಕ್ಕೇರಿದೆ.

ತಮಿಳು ನಾಡಿನಲ್ಲಿ 571, ದೆಹಲಿಯಲ್ಲಿ 503 ಸೋಂಕಿತ ಪ್ರಕರಣಗಳಿವೆ. ಇನ್ನು ಅಮೆರಿಕಾದಲ್ಲಿದ್ದ ಐವರು ಕೇರಳಿಗರು ಕೊರೋನಾಗೆ ಮೃತಪಟ್ಟಿದ್ದಾರೆ ಎಂದು ವರದಿ ಬಂದಿದೆ. ಕೇರಳದಿಂದ ಹೊರಗಿರುವ ಪ್ರಜೆಗಳು ಕೊರೋನಾಗೆ ಮೃತಪಟ್ಟ ಸಂಖ್ಯೆ 15ಕ್ಕೇರಿದೆ.

ಚೆನ್ನೈ ಎಕ್ಸ್ ಪ್ರೆಸ್ ಸಿನೆಮಾ ನಿರ್ಮಾಪಕ ಕರೀಂ ಮೊರಾನಿಯವರ ಪುತ್ರಿಗೆ ಕೊರೋನಾ ಸೋಂಕು ತಗುಲಿದೆ. ಮಾರ್ಚ್ ಮೊದಲ ವಾರ ಶ್ರೀಲಂಕಾದಿಂದ ವಾಪಸ್ಸಾಗಿದ್ದ ಶಾಝಾ ಅವರಿಗೆ ಆರಂಭದಲ್ಲಿ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಆದರೆ ನಿನ್ನೆ ರಕ್ತ ಪರೀಕ್ಷೆ ಮಾಡಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ. ಮತ್ತೊಬ್ಬ ಮಗಳು ಜೊಯಾಳಲ್ಲಿ ಲಕ್ಷಣ ಕಂಡುಬಂದಿತ್ತಾದರೂ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ಇಬ್ಬರೂ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿದ್ದು ನಿಗಾದಲ್ಲಿದ್ದಾರೆ ಎಂದು ಮೊರಾನಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 266ಕ್ಕೇರಿದೆ. ಗುಜರಾತ್ ರಾಜ್ಯದಲ್ಲಿ ಇಂದು ಹೊಸ 16 ಕೇಸುಗಳು ಪತ್ತೆಯಾಗಿವೆ.

SCROLL FOR NEXT