ದೇಶ

ಕೊವಿಡ್-19: ರಾಷ್ಟ್ರಪತಿ, ಪ್ರಧಾನಿ, ಉಪ ರಾಷ್ಟ್ರಪತಿ, ರಾಜ್ಯಪಾಲರ, ಸಂಸದರ ವೇತನ ಶೇ.30ರಷ್ಟು ಕಡಿತ

Lingaraj Badiger

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರ, ಕೇಂದ್ರ ಸಚಿವ ಹಾಗೂ ಸಂಸದರ ಒಂದು ವರ್ಷದ ವೇತನ, ಪಿಂಚಣಿ ಮತ್ತು ಭತ್ಯೆಯನ್ನು ಶೇ.30ರಷ್ಟು ಕಡಿತಗೊಳಿಸಲು ಕೇಂದ್ರ ಸಚಿವ ಸಂಪುಟ ಸೋಮವಾರ ಒಪ್ಪಿಗೆ ನೀಡಿದೆ.

ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ಹಾಗೂ ಇದರ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಸಚಿವ ಸಂಪುಟ ಸಭೆ ಕರೆದಿದ್ದರು. ಈ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಸಂಸದರ ಒಂದು ವರ್ಷದ ವೇತನ, ಪಿಂಚಣಿ ಮತ್ತು ಭತ್ಯೆ ಹಾಗೂ ಸಂಸದರ ನಿಧಿಯನ್ನು ಮುಂದಿನ ಎರಡು ವರ್ಷಗಳ ಕಾಲ ಸ್ಥಗಿತಗೊಳಿಸುವುದಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಮುಂದಿನ ಎರಡು ವರ್ಷಗಳ ಕಾಲ ಸಂಸದರ ನಿಧಿ ಸ್ಥಗಿತಗೊಳಿಸುವುದರಿಂದ ಸುಮಾರು 7900 ಕೋಟಿ ಹಾಗೂ ಸಂಸದರ ವೇತನ, ಪಿಂಚಣಿ ಮತ್ತು ಭತ್ಯೆಯಲ್ಲಿ ಶೇ. 30ರಷ್ಟು ಕಡಿತಗೊಳಿಸುವುದರಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.

ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಹಣ ಹೊಂದಿಸಲು ಕೇಂದ್ರ ಸರ್ಕಾರ ಅನೇಕ ಮಾರ್ಗಗಳನ್ನು ಹುಡುಕಿದೆ. ವರ್ಷಕ್ಕೆ ಒಬ್ಬ ಸಂಸದರಿಗೆ 5 ಕೊಟಿ ರೂ. ಸಂಸದ ನಿಧಿ ಇರುತ್ತದೆ. ಎರಡೂ ವರ್ಷದ 10 ಕೋಟಿ ಹಣವನ್ನು ಕೇಂದ್ರ ಸರ್ಕಾರವೇ ಬಳಸಿಕೊಳ್ಳಲು ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ 2020-21 ಮತ್ತು 2021-22ಸಾಲಿನ ಸಂಸದರ ನಿಧಿ ಸಂಪೂರ್ಣವಾಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ.

SCROLL FOR NEXT